ಅರಸೀಕೆರೆ, ಶುಕ್ರವಾರ, 3 ಸೆಪ್ಟೆಂಬರ್ 2010( 16:06 IST )
ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟಿಸಲು ಯಾವುದೇ ವಿಷಯವಿಲ್ಲದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅಕ್ರಮ ಗಣಿಗಾರಿಕೆ ಬೆನ್ನಹಿಂದೆ ಬಿದ್ದಿವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಕಡೂರಿಗೆ ತೆರಳುವ ಮಾರ್ಗಮಧ್ಯೆ ಪಟ್ಟಣದ ಕ್ರೀಡಾಂಗಣದಲ್ಲಿ ಇಳಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಸರಿಸಿರುವ ಕ್ರಮಗಳು ಸಮರ್ಪಕವಾಗಿದ್ದು, ಪ್ರಾಥಮಿಕ ಹಂತದ ತನಿಖೆ ಸಂದರ್ಭ ಕಾಂಗ್ರೆಸ್‌ನ ಲಾಡ್ ಸಹೋದರರ ಬಣ್ಣ ಬಯಲಾಗಿದೆ. ತನಿಖೆ ಪೂರ್ಣವಾಗುವ ಹೊತ್ತಿಗೆ ಅದು ಕಾಂಗ್ರೆಸ್ ಮುಖಂಡರಿಗೆ ಮುಳುವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಚಿಕೂನ್ ಗುನ್ಯಾ, ಡೆಂಗ್ಯು, ಎಚ್1ಎನ್1 ರೋಗಗಳನ್ನು ಸಮರ್ಥವಾಗಿ ನಿಯಂತ್ರಿಸಲು ಸರಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ರೋಗ ಬಾಧಿತರಿಗೆ ಪೂರಕ ಸೌಲಭ್ಯ ನೀಡಲು ಸರಕಾರ ಕ್ರಮ ಜರುಗಿಸಲಿದೆ. ಯಾವುದೇ ಕಾರಣಕ್ಕೂ ಜನತೆ ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಈ ತನಕ ಎಚ್1ಎನ್1 ರೋಗದಿಂದ ಒಟ್ಟು 96 ಮಂದಿ ಸಾವೀಗೀಡಾಗಿದ್ದು, ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧಗಳನ್ನು ಸಂಗ್ರಹಿಸಿಡುವ ದಿಸೆಯಲ್ಲಿ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅನುಭವದ ಸಲಹೆಗಳನ್ನು ಸರಕಾರಕ್ಕೆ ನೀಡಿದರೆ ಅದನ್ನು ಸ್ವೀಕರಿಸಲು ತಾವು ಸಿದ್ಧ. ಬರೀ ಟೀಕಿಸುತ್ತ ಕುಳಿತರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.