ಅರಣ್ಯ ಖಾತೆ ಹೊಂದಿರುವ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಕಾನೂನು ಬಂದು ನಾಲ್ಕು ವರ್ಷವಾಗಿದೆ. ಈವರೆಗೂ ಅನುಷ್ಠಾನಗೊಳಿಸಿಲ್ಲ. ಇಡೀ ಜಿಲ್ಲೆಯಲ್ಲಿ 260 ಗ್ರಾಮ ಪಂಚಾಯಿತಿಯಲ್ಲಿ 210 ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿಲ್ಲ.
ಜಿಲ್ಲೆಯಲ್ಲಿ ಒಟ್ಟು 81,879 ಅರ್ಜಿ ಬಂದಿದೆ. ಆದರೆ ಪರಿಶೀಲನೆ ನಡೆಸದೆ, ಸ್ಥಳ ತನಿಖೆ ಮಾಡದೆ 49,543 ಅರ್ಜಿ ತಿರಸ್ಕರಿಸಲಾಗಿದೆ. ಕೆಲವೆಡೆ ಗ್ರಾ. ಪಂ. ಸಭೆ ನಡೆಸಿ ಸದಸ್ಯರ ಸಹಿ ಪಡೆದು ಅರ್ಜಿ ತಿರಸ್ಕರಿಸಲಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸುವಷ್ಟು ವ್ಯವಧಾನ ಅಧಿಕಾರಿಗಳಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ಗ್ರಾಮಕ್ಕೆ ಗ್ರಾಮ ಸಭೆ ಕರೆದು ಸಮಿತಿ ರಚಿಸಬೇಕು. ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಬೇಕು. ಆದರೆ ಜಿಲ್ಲಾಡಳಿತ ಈ ಕಾನೂನು ಪ್ರಕಾರ ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸರ್ವಾಧಿಕಾರ ಮಾಡುತ್ತಿದ್ದು, ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ 19 ಗ್ರಾಮದಲ್ಲಿ ಸಮಿತಿ ರಚನೆಯಾಗಿದೆ. ಗೌತಮಪುರದಲ್ಲಿ ಸಮಿತಿ ರಚನೆಯಾಗಿಲ್ಲ. ಒಟ್ಟು 10,900 ಅರ್ಜಿ ಬಂದಿದ್ದು, 9000 ಅರ್ಜಿ ವಜಾ ಮಾಡಲಾಗಿದೆ. ತಕ್ಷಣ ಗ್ರಾ.ಪಂ. ಮಟ್ಟದ ಸಮಿತಿ ರದ್ದುಪಡಿಸಬೇಕು. ಗ್ರಾಮಕ್ಕೊಂದರಂತೆ ಸಮಿತಿ ರಚಿಸಬೇಕು. ಭೂಮಿ ಸಮಸ್ಯೆಗಾಗಿ ಕಾಂಗ್ರೆಸ್ ಪಕ್ಷದಿಂದ ನಿರ್ಣಾಯಕ ಹೋರಾಟ ನಡೆಸಲಾಗುವುದು. ಇದಕ್ಕೆ ಕೈಕೋಳಹಾಕಿದರೂ ತೊಂದರೆಯಿಲ್ಲ. ಕಾನೂನು ಅನುಷ್ಠಾನಕ್ಕೆ ಒತ್ತಾಯಿಸಿ ಶಿಕಾರಿಪುರ, ಸೊರಬಕ್ಕೂ ಹೋಗುತ್ತೇನೆ. ಈ ಅವ್ಯವಸ್ಥೆ ಸರಿಪಡಿಸುವವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದರು.