ಅಣ್ಣಿಗೇರಿಯಲ್ಲಿ ದೊರೆತ ನೂರಾರು ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್ ವೈದ್ಯರು ಶುಕ್ರವಾರ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರಿಗೆ ಮಧ್ಯಂತರ ವರದಿ ನೀಡುವ ಮೂಲಕ ರಾಜ್ಯಾದ್ಯಂತ ಕಳೆದ ಆರು ದಿನಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದ್ದ ಬುರುಡೆ ಪುರಾಣದ ಅಂತೆ-ಕಂತೆಗಳಿಗೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ.
ಅಣ್ಣಿಗೇರಿಯಲ್ಲಿ ದೊರೆತ ನೂರಾರು ಬುರುಡೆಗಳಲ್ಲಿ ಮೂರನ್ನು ಕಿಮ್ಸ್ ವೈದ್ಯರು ಪರೀಕ್ಷೆ ನಡೆಸಿದ್ದರು. ಆ ಬಗ್ಗೆ ವೈದ್ಯರು ಧಾರವಾಡ ಜಿಲ್ಲಾಧಿಕಾರಿ ಜೈನ್ ಅವರಿಗೆ ಮಧ್ಯಂತರ ವರದಿ ನೀಡಿದ್ದಾರೆ. ವರದಿ ಆಧಾರದಲ್ಲಿ ಮೂರು ಬುರುಡೆಗಳಲ್ಲಿ ಎರಡು ಪುರುಷರದ್ದು, ಒಂದು ಮಹಿಳೆಯದ್ದಾಗಿದೆ. ಅಂದಾಜು 40ರ ಆಸುಪಾಸು ವಯಸ್ಸು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುರುಡೆ ರಹಸ್ಯದ ಕುರಿತು ಮಾತನಾಡಿದ ಜೈನ್, ಸಾಯುವ ಮುನ್ನ ಯಾವುದೇ ಗಾಯದ ಗುರುತು ಇಲ್ಲದ ಕಾರಣ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಬುರುಡೆಯನ್ನು ಹೈದರಾಬಾದ್ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮುಖೇನ ಬುರುಡೆಯ ಕಾಲಮಾನದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂದರು.
ಆದರೂ ಹತ್ಯಾಕಾಂಡವೇ ಭಾರೀ ಪ್ರಮಾಣದ ಬುರುಡೆ ಹೂತುಹಾಕಿರುವ ಸಾಧ್ಯತೆಯೇ ದಟ್ಟವಾಗಿದೆ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಸಿದ ನಂತರವಷ್ಟೇ ಪೂರ್ಣ ಪ್ರಮಾಣದ ಮಾಹಿತಿ ಲಭಿಸಲು ಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೇ ಅಣ್ಣಿಗೇರಿಯ ಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳೆಯಿಂದಾಗಿ ಉತ್ಖನನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜೈನ್ ವಿವರಿಸಿದ್ದಾರೆ. ಬುರುಡೆಗಳನ್ನ ಹಾಗೂ ಪ್ರದೇಶವನ್ನು ಸುರಕ್ಷಿತವಾಗಿಡಲು ರಾಜ್ಯ ಪ್ರಾಚ್ಯ ವಸ್ತು ಇಲಾಖೆ ಸುಪರ್ದಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಬುರುಡೆಯ ಕಾಲಮಾನ, ಯಾವ ಕಾರಣದಿಂದ ಸಾವನ್ನಪ್ಪಿರಬಹುದು ಎಂಬ ಬಗ್ಗೆ ಕಾರ್ಬನ್ ಡೇಟಿಂಗ್ ಹಾಗೂ ಇನ್ನಿತರ ಪರೀಕ್ಷೆಯ ನಂತರವೇ ನಿಖರವಾಗಿ ಹೇಳಲು ಸಾಧ್ಯ ಎಂದು ಡಾ.ಗಜಾನನ ನಾಯಕ್ ತಿಳಿಸಿದ್ದಾರೆ.