ಪದವೀಧರರ ಕೊರತೆಯಿಂದ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳು ಖಾಲಿ ಉಳಿದಿವೆ ಎಂದು ತೋಟಗಾರಿಕೆ ಸಚಿವ ಉಮೇಶ್ ವಿ. ಕತ್ತಿ ತಿಳಿಸಿದರು.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಬಾಗಲಕೋಟೆಯಲ್ಲಿ ಆರಂಭಿಸಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪದವೀಧರರ ಕೊರತೆಯನ್ನು ನೀಗಿಸುವ ವಿಶ್ವಾಸವಿದೆ. ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಲಭ್ಯತೆ ಅವಕಾಶ ಹೆಚ್ಚಿದ್ದು, ದೇಶ, ವಿದೇಶಗಳಲ್ಲೂ ಬೇಡಿಕೆಯಿದೆ. ದೇಶದಲ್ಲಿ ಕೇವಲ 3 ರಾಜ್ಯಗಳಲ್ಲಿ ತೋಟಗಾರಿಕೆ ವಿವಿಗಳಿದ್ದು, ಅದರಲ್ಲಿ ಕರ್ನಾಟಕವೂ ಒಂದು ಎಂದರು.
ನಂಜನಗೂಡು ತಾಲೂಕಿನ ಪಾಂಡವಪುರದ ಸರಕಾರಿ ರೇಷ್ಮೆ ಕ್ಷೇತ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ತೋಟಗಾರಿಕೆ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನದ ಭರಾಟೆಯಿಂದ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರಗಳು ಮುಚ್ಚುವಂತಾಗಿತ್ತು. ಆದರೀಗ ಈ ಕ್ಷೇತ್ರಗಳು ಬೆಳವಣಿಗೆ ಕಾಣುತ್ತಿದ್ದು, ಪ್ರಸ್ತುತ ರಾಜ್ಯದ ಕೃಷಿ ಆದಾಯದಲ್ಲಿ ಶೇ.40ರಷ್ಟನ್ನು ತೋಟಗಾರಿಕೆ ತಂದು ಕೊಡುತ್ತಿದೆ. ಆದಾಯ ಪ್ರಮಾಣವನ್ನು ಶೇ.50 ರಷ್ಟಕ್ಕೇರಿಸಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯದಲ್ಲಿ ತೋಟಗಾರಿಕೆಗೆ ಬೆಳೆಗಳಿಗೆ ಪೂರಕವಾದ ಹವಾಗುಣ, ಉತ್ತಮ ಮಣ್ಣು, ನೀರಿನ ಸೌಲಭ್ಯವಿದೆ. 18 ಲಕ್ಷ ಹೆಕ್ಟೇರ್‌ನಲ್ಲಿದ್ದ ತೋಟಗಾರಿಕೆ ಬೆಳೆಗಳನ್ನು ಕೇವಲ 3 ವರ್ಷಗಳಲ್ಲಿ 21 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಲಾಗಿದೆ. ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಾಯಧನ ನೆರವು ನೀಡಲಾಗುತ್ತಿದೆ. ಪ್ರಾಥಮಿಕ ಸಂಸ್ಕರಣ ಘಟಕ ಆರಂಭಿಸಲು 10 ಲಕ್ಷದವರೆಗೆ ಸಬ್ಸಿಡಿ ಕೊಡಲಾಗುತ್ತದೆ.