ಬಿಜೆಪಿ ಹಗರಣದಿಂದ ಜನರು ಬೇಸತ್ತು ಹೋಗಿದ್ದಾರೆ: ಅಲ್ಲಂ ವೀರಭದ್ರಪ್ಪ
ಗುಲ್ಬರ್ಗ, ಶನಿವಾರ, 4 ಸೆಪ್ಟೆಂಬರ್ 2010( 16:14 IST )
ಆಡಳಿತಾರೂಢ ಬಿಜೆಪಿ ಸರಕಾರದ ದುರಾಡಳಿತ, ಹಗರಣಗಳಿಂದಾಗಿ ರಾಜ್ಯದ ಜನರು ಬೇಸತ್ತು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿಯತ್ತ ಒಲವು ತೋರುತ್ತಿರುವುದರಿಂದ ಗುಲ್ಬರ್ಗ ದಕ್ಷಿಣ ಕ್ಷೇತ್ರದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ ಗೆಲುವು ಸಾಧಿಸುವ ಎಲ್ಲ ಲಕ್ಷಣಗಳಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ತಿಳಿಸಿದ್ದಾರೆ.
ಡಾ.ಅಜಯ್ ಸಿಂಗ್ ಪರ ನಾನಾ ಪ್ರದೇಶಗಳಲ್ಲಿ ಪಾದಯಾತ್ರೆ, ಪ್ರಚಾರ ನಡೆಸುತ್ತಿರುವ ಅವರು ನಗರದ ಕೆಪಿಸಿಸಿ ಕ್ಯಾಂಪ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪರ ಅಲೆಯಿಂದಾಗಿ ಬಿಜೆಪಿ-ಜೆಡಿಎಸ್‌ನಲ್ಲಿ ತಳಮಳ ಉಂಟಾಗಿದೆ. ಕಾರ್ಯಕರ್ತರು ಬಳ್ಳಾರಿ ಪಾದಯಾತ್ರೆಯಿಂದ ಸ್ಫೂರ್ತಿಗೊಂಡಿದ್ದು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಗೆಲುವಿನ ಸೂಚನೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಲಿಂಗಾಯತರು, ಬ್ರಾಹ್ಮಣರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯವರು ಬೆಂಬಲಿಸಿದ್ದಾರೆ. ಯುವಕರು ಹೆಚ್ಚಾಗಿ ಜತೆಗಿದ್ದಾರೆ. ಚುನಾವಣೆಯು ಬಹುಮುಖ್ಯವಾಗಿದ್ದು, ಕಾಂಗ್ರೆಸ್‌ನ ಅಜಯ್ ಸಿಂಗ್ ಗೆಲುವಿನೊಂದಿಗೆ ಬಿಜೆಪಿ ಸರಕಾರ ಮತ್ತು ಆ ಪಕ್ಷದ ಅವನತಿಯ ಕ್ಷಣಗಣನೆ ಶುರುವಾಗಲಿದೆ. ಕಾಂಗ್ರೆಸ್ ಗೆದ್ದ ನಂತರ ಏನು ಬೇಕಾದರೂ ಮಹತ್ವದ ಬದಲಾವಣೆಗಳಾಬಹುದು ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಚರ್ಚ್, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗಿದೆ. ಇದು ಬಿಜೆಪಿ ಸಾಧನೆ ಎಂದು ಟೀಕಿಸಿದರು.