ರಾಜ್ಯದ ನಾನಾ ಕಡೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸರಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ನಗರದ ಕಣೇಕಲ್ಲು ಬಸ್ ನಿಲ್ದಾಣದ ಬಳಿ ಶಾಲಾ ಮಕ್ಕಳಿಂದ ಪ್ರದರ್ಶನಗೊಂಡ ಆರೋಗ್ಯ, ನೈರ್ಮಲ್ಯ ಕುರಿತ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿ, ಡೆಂಗ್ಯು, ಚಿಕೂನ್ ಗುನ್ಯಾ, ಮಲೇರಿಯ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರಕಾರ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಆದರೂ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.
ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದ್ದು, ಸರಕಾರೇತರ ಸಂಸ್ಥೆಗಳು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಂಕ್ರಾಮಿಕ ರೋಗ, ಗಂಭೀರ ಸ್ವರೂಪದ ಕಾಯಿಲೆಗಳಿಂದ ಶಂಕಿತ ರೋಗಿಗಳು ಮೃತಪಟ್ಟ ಪ್ರಕರಣಗಳಲ್ಲಿ ಸರಕಾರಿ ವೈದ್ಯರ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ನಗರದ ಕಣೇಕಲ್ಲು ಬಸ್ ನಿಲ್ದಾಣದ ಬಳಿ ಪ್ರದರ್ಶನಗೊಂಡ ಆರೋಗ್ಯ, ನೈರ್ಮಲ್ಯ ಕುರಿತ ಬೀದಿ ನಾಟಕ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ಜಿಲ್ಲೆಗಳ ಡಿಎಚ್ಒ, ಜಿಲ್ಲಾ ಸರ್ಜನ್‌ಗಳಿಗೆ ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.