ಗುಲ್ಬರ್ಗಾ ಮತ್ತು ಕಡೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ಸಂಸದ ಎನ್. ಚಲುವರಾಯಸ್ವಾಮಿ ಹೇಳಿದರು.
ಬಿಜೆಪಿ ಸರಕಾರದ ಧೋರಣೆ ಮತ್ತು ವರ್ತನೆಯಿಂದ ರೋಸಿ ಹೋಗಿರುವ ಮತದಾರರು ಉಭಯ ಕ್ಷೇತ್ರಗಳಲ್ಲಿ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲುವಿನ ವಿಶ್ವಾಸವಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ನಿರೀಕ್ಷಿಸಲಾಗದು ಎನ್ನುವುದನ್ನು ಜನತೆ ಮನಗಂಡಿದ್ದಾರೆ. ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಭವಿಷ್ಯದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲಿದೆ ಎಂದರು.
ಗಣಿ ಹಗರಣ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಿದ ಕಾಂಗ್ರೆಸಿಗರು ಈಗ ಗದ್ದಲ ಮಾಡುತ್ತಿಲ್ಲ. ಅವರದೇ ಪಕ್ಷದ ಕೇಂದ್ರ ಸರಕಾರ ಗಣಿಗಾರಿಕೆ ಮತ್ತು ಅದಿರು ರಫ್ತು ನಿಷೇಧ ವಿಷಯದಲ್ಲಿ ಮೌನ ವಹಿಸಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಿಗೂಢ ಹೊಂದಾಣಿಕೆ ಏರ್ಪಟ್ಟಿದೆ. ಲೂಟಿ ವಿಷಯದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದಾರೆ. ಈ ಆಟ ಹೆಚ್ಚು ದಿನ ನಡೆಯೊಲ್ಲ ಎಂದು ಚಲುವರಾಯಸ್ವಾಮಿ ಎಚ್ಚರಿಸಿದರು.