ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಉಂಟು ಮಾಡದೆ ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಚಿವರು, ಶಾಸಕರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಸಂಸದರು ಮತ್ತು ಶಾಸಕರು, ಮಂತ್ರಿಗಳು ಬಾಯಿಗೆ ಬಂದಂತೆ ಹೇಳಿಕೆ ಕೊಡುವ ಮೂಲಕ ಸರಕಾರದ ವರ್ಚಸ್ಸಿಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿಗೆ ಇದು ಮುಕ್ತಾಯ ಆಗಬೇಕು ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.
ಸಚಿವರು, ಶಾಸಕರು ಜವಾಬ್ದಾರಿ ಮರೆತು ಹಗುರವಾಗಿ ಮಾತನಾಡುತ್ತಿರುವುದಕ್ಕೆ ಕಡಿವಾಣ ಹಾಕಿ ಎಂದು ಆರ್ಎಸ್ಎಸ್ ನಾಯಕರು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೊನೆಯ ಸುತ್ತಿನ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ದೂರವಾಣಿ ಮೂಲಕ ಸಚಿವರು, ಶಾಸಕರಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿಗಳು, ನಿಮ್ಮ ವರ್ತನೆಯನ್ನು ತಿದ್ದಿಕೊಂಡು ಕ್ಷೇತ್ರದ ಜನರ ಜತೆ ಆದಷ್ಟು ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಳ್ಳಿ, ಸರಕಾರದ ಜನಪರ ಯೋಜನೆಗಳ ಬಗ್ಗೆ ಅವರಿಗೆ ತಿಳಿವಳಿಕೆ ಕೊಟ್ಟು ಪಕ್ಷ ಮತ್ತು ಸರಕಾರದ ಘನತೆ, ಗೌರವ ಹೆಚ್ಚಾಗುವಂತೆ ನಡೆದುಕೊಳ್ಳಿ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಯಾವುದೇ ಕಾರಣಕ್ಕೂ ಪಕ್ಷದ ಮೂಲದ ಕಾರ್ಯಕರ್ತರನ್ನು ಕಡೆಗಣಿಸಬೇಡಿ, ತಾತ್ಸಾರ ಮಾಡಬೇಡಿ. ಅವರೇ ನಮ್ಮ ಮೂಲ ಆಧಾರಸ್ತಂಭ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿ ಬಗೆಹರಿಸುವ ಪ್ರಯತ್ನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.