ಕೈ ಅಥವಾ ಕಾಲುಗಳಲ್ಲಿ ಐದಕ್ಕಿಂತ ಹೆಚ್ಚು ಬೆರಳು ಹೊಂದಿದವರನ್ನು ಅದೃಷ್ಟವಂತರು ಎಂದು ಹೇಳುವುದೂ ಇದೆ. ಆದರೆ ಬೆಂಗಳೂರಿನ ಬಾಲಕಿಯೊಬ್ಬಳಿಗೆ ಬರೋಬ್ಬರಿ 27 ಬೆರಳುಗಳಿವೆ. ಆಕೆಯ ಪಾಲಿಗೆ ಅದು ಅದೃಷ್ಟವಾಗುವ ಬದಲು ಕಂಟಕವಾಗಿ ಪರಿಣಮಿಸಿದೆ. ಯಾವುದೇ ಕೆಲಸವನ್ನೂ ನೆಟ್ಟಗೆ ಮಾಡಲು ಸಹಾಯ ಮಾಡಬೇಕಾಗಿದ್ದ ಬೆರಳುಗಳೇ ಅಡ್ಡ ಬರುತ್ತಿವೆ.
13ರ ಹರೆಯ ಈ ಬಾಲಕಿಯ ಹೆಸರು ವರಲಕ್ಷ್ಮಿ. ಬೆಂಗಳೂರಿನ ರಾಜನಕುಂಟೆ ಸರಕಾರಿ ಪ್ರೌಢ ಶಾಲೆಯ ಬಾಲಕಿಯೀಕೆ. ತಾಯಿ ಪಾರ್ವತಮ್ಮ ಸದೇನಹಳ್ಳಿಯಲ್ಲಿ ದಿನಗೂಲಿ ಕಾರ್ಮಿಕೆ.
PR
ತನ್ನ ಶಾಲೆಯ ಪ್ರಾಂಶುಪಾಲ ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಮೊದಲು ಇವರು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಮೊರೆ ಹೋಗಿದ್ದಾರೆ. ಪ್ರಾಂಶುಪಾಲರೇ ಹೇಳುವ ಪ್ರಕಾರ ಬಾಲಕಿಯ ಕುಟುಂಬ ತೀರಾ ಬಡತನದಲ್ಲಿದೆ.
ಇಂತಹ ದೈಹಿಕ ವೈಕಲ್ಯತೆ ಇರುವ ಹೊರತಾಗಿಯೂ ಪ್ರತಿಭಾವಂತೆಯಾಗಿರುವ ವರಲಕ್ಷ್ಮಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ. ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡ ವೈದ್ಯರು 60ರಿಂದ 70 ಸಾವಿರ ರೂಪಾಯಿ ವೆಚ್ಚವಾಗುವ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲು ಮುಂದಾಗಿದ್ದಾರೆ.
ಒಂದೊಂದು ಕೈಯಲ್ಲಿ ವರಲಕ್ಷ್ಮಿ ಹೊಂದಿರುವ ಬೆರಳುಗಳ ಸಂಖ್ಯೆ ತಲಾ ಎಂಟು. ಕಾಲಿನಲ್ಲೂ ಹೆಚ್ಚುವರಿ ಬೆರಳುಗಳನ್ನು ಹೊಂದಿದ್ದಾಳೆ. ಇದರಿಂದ ಆಕೆಯ ಕೈಗಳು ಮತ್ತು ಪಾದದ ಬೆಳವಣಿಗೆಗಳಿಗೆ ತೊಂದರೆಯಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕೈ-ಕಾಲುಗಳಲ್ಲಿ ಐದಕ್ಕಿಂದ ಹೆಚ್ಚು ಬೆರಳುಗಳನ್ನು ಹೊಂದಿರುವುದು ಇದೇ ಮೊದಲಲ್ಲ. ಇಂತಹ ಪ್ರಕರಣಗಳನ್ನು ಸಾಕಷ್ಟು ಕಾಣಬಹುದಾಗಿದೆ. ಆದರೂ ಇದರಿಂದಾಗುವ ತೊಂದರೆ ಮಾತ್ರ ಅಷ್ಟಿಷ್ಟಲ್ಲ.
ಮೂಲಭೂತ ಸಮಸ್ಯೆ ಎಂದು ಕಣ್ಣೆದುರಿಗೆ ರಾಚುವುದು ಮಾಮೂಲಿ ಚಪ್ಪಲಿ ಅಥವಾ ಶೂಗಳನ್ನು ಹಾಕಲು ಸಾಧ್ಯವಾಗದೇ ಇರುವುದು. ಇತರರಂತೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕೂಡ ಕಷ್ಟ. ಊಟ ಮಾಡುವುದು ಕೂಡ ಹೆಚ್ಚುವರಿ ಬೆರಳುಗಳಿಂದ ಕಷ್ಟವೇ.
ಶಸ್ತ್ರಚಿಕಿತ್ಸೆಯಿಂದಾಗಿ ಶಾಲೆಗೆ ರಜೆ ಹಾಕುವ ಅನಿವಾರ್ಯತೆ ಮತ್ತಿತರ ಸಮಸ್ಯೆಗಳು ಎದುರಾಗುವ ಕಾರಣ ತಕ್ಷಣವೇ ವೈದ್ಯರು ಕಾರ್ಯಪ್ರವೃತ್ತವಾಗುತ್ತಿಲ್ಲ. ಬೇಸಿಗೆ ರಜೆ ಸಂದರ್ಭದಲ್ಲಿ ಆಕೆಯ ಕೈ-ಕಾಲುಗಳಲ್ಲಿನ ಸಮಸ್ಯೆಗೆ ಮುಕ್ತಿ ನೀಡುವುದಾಗಿ ಅವರು ಹೇಳಿದ್ದಾರೆ.