ಬಾಗೇಪಲ್ಲಿ, ಭಾನುವಾರ, 5 ಸೆಪ್ಟೆಂಬರ್ 2010( 14:35 IST )
ನನ್ನ ಆದೇಶಗಳನ್ನು ಪಾಲಿಸದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಎಚ್ಚರಿಸಿದರು.
ಇಲ್ಲಿನ ಸಂತೆ ಮೈದಾನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಚುನಾವಣೆ ಸಮಯಕ್ಕೆ ಮಾತ್ರ ರಾಜಕೀಯವನ್ನು ಸೀಮಿತಗೊಳಿಸಿ ನಂತರ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಅಭಿವೃದ್ದಿ ಕಡೆ ಗಹನಹರಿಸಬೇಕು. ನಾನು ಮೃದು ಎಂಬ ಕಾರಣಕ್ಕೆ ಯಾವುದೇ ಆದೇಶ ನೀಡಿದರೂ ಕನಿಷ್ಠ ವರದಿಯನ್ನು ಸಹ ಅಧಿಕಾರಿಗಳು ಸಲ್ಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನನ್ನ ಅದೇಶ ಮೀರಿದ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು.
ತಾಲೂಕಿನ ಹೊಸಹುಡ್ಯ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ಖುದ್ದಾಗಿ ನಾನೇ ಭೇಟಿ ನೀಡಿ ಪರೀಶೀಲಿಸಿ ಅವನ್ನು ಮುಚ್ಚುವಂತೆ ಜಿ.ಪಂ. ತಾಂತ್ರಿಕ ಅಧಿಕಾರಿಗೆ ಆದೇಶಿಸಿದ್ದೇನೆ. ಆದೇಶ ಮಾಡಿ ಮೂರು ತಿಂಗಳು ಕಳೆದರೂ ಮುಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಈ ಬಗ್ಗೆ ಸಮಜಾಯಿಷಿ ನೀಡುವಂತೆ ಎಇಇ ಜಯರಾಮಯ್ಯ ಅವರಿಗೆ ಸೂಚಿಸಿದರು.
ಯೋಜನೆ ಸಿದ್ಧವಾಗಿದೆ. 15 ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಸಮಜಾಯಿಷಿ ನೀಡಿದ ಎಇಇ ಜಿಲ್ಲಾಧಿಕಾರಿ ಕಡೆ ನೋಡಿದರು. `ನನ್ನ ಕಡೆ ಏನು ನೋಡುತ್ತೀಯಾ, ಸಚಿವರ ಕಡೆ ನೋಡಿ ಉತ್ತರ ಕೊಡು' ಎಂದು ಜಿಲ್ಲಾಧಿಕಾರಿ ಗದರಿದರು.
ಅಧಿಕಾರಿ ಉತ್ತರದಿಂದ ಅಸಮಾಧಾನಗೊಂಡ ಸಚಿವರು, 10-15 ದಿನಗಳ ಒಳಗೆ ಗುಂಡಿ ಮುಚ್ಚದಿದ್ದಲ್ಲಿ ಅಮಾನತು ಇಲ್ಲವೇ ವರ್ಗಾವಣೆಗೆ ಸಿದ್ಧವಾಗಿರಿ ಎಂದು ಎಚ್ಚರಿಸಿದರು.