ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಇನ್ಮುಂದೆ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಾತ್ರ ವಹಿಸಲಿದ್ದು, ಒಂದೇ ಪಕ್ಷದ ಅಧಿಕಾರಕ್ಕೆ ಅವಕಾಶ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ವೈ.ಎಸ್.ವಿ.ದತ್ತ ಅವರ ಪರ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವ ಕನಸು ನನಸಾಗುವುದಿಲ್ಲ ಎಂದರು.
ಕೆಲವೇ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತ ನಡೆಸುತ್ತಿವೆ. ಆದರೆ ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಪ್ರಾದೇಶಿಕ ಪಕ್ಷಗಳ ಕೈಯಲ್ಲಿದೆ. ಹಾಗಾಗಿ ಇನ್ನು ಮುಂದೆ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರವೇ ಮಹತ್ವದ್ದಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತ ನೋಡಿ ಜನರು ಈಗಾಗಲೇ ಭ್ರಮನಿರಸಗೊಂಡಿದ್ದಾರೆ. ಬಿಜೆಪಿ ಸುಳ್ಳು ಭರವಸೆಗೆ ಮರುಳಾಗಿ ಜನರು ಆಶೀರ್ವಾದ ನೀಡಿದ್ದರೂ ಕೂಡ ಇದೀಗ ಅವರ ಬಂಡವಾಳ ಕೂಡ ಬಯಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ ಎಂದರು.