ಅಕ್ರಮದಲ್ಲಿ ಎಚ್‌ಡಿಕೆ ಕುಟುಂಬ; ಸಿಎಂಗೆ ತಲೆ ಕೆಟ್ಟಿದೆ: ಎಚ್‌ಡಿಕೆ
ಪುರಾವೆ ಇದ್ದರೆ ನನ್ನ ಬಂಧಿಸಲಿ....
ಬೆಂಗಳೂರು, ಸೋಮವಾರ, 6 ಸೆಪ್ಟೆಂಬರ್ 2010( 12:53 IST )
ಗುಲ್ಬರ್ಗಾ ದಕ್ಷಿಣ, ಕಡೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಕ್ರಮ ಗಣಿ ಕಿಡಿ ರಾಜಕೀಯ ಕೆಸರೆಚಾಟ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹೋದರ ಅಕ್ರಮ ಅದಿರು ಸಾಗಣೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮುಖಂಡರು ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ ಎಂದು ಗುಲ್ಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಸಹೋದರ ಎಚ್.ಡಿ.ರಮೇಶ್ ಮಾಲೀಕತ್ವದ ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಬೇರೆ, ಬೇರೆ ಹೆಸರುಗಳಲ್ಲಿ ಅದಿರು ರವಾನೆ ಮಾಡುತ್ತಿರುವುದಾಗಿ ಆರೋಪಿಸಿದರು. ಜೆಡಿಎಸ್ ಮುಖಂಡರು ವಿನಾಃ ಕಾರಣ ಆಡಳಿತಾರೂಢ ಬಿಜೆಪಿ ವಿರುದ್ಧವೇ ಟೀಕಿಸುತ್ತಿದ್ದಾರೆ. ತಾವೇ ಅಕ್ರಮ ಗಣಿ, ಅಕ್ರಮ ಅದಿರು ಸಾಗಾಟದಲ್ಲಿ ತೊಡಗಿ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು.
ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರ ಬಂಡವಾಳ ಬಯಲು ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಗುಡುಗಿದರು.
ಪುರಾವೆ ಇದ್ದರೆ ಬಂಧಿಸಲಿ-ಎಚ್‌ಡಿಕೆ: ಅಕ್ರಮ ಅದಿರು ಸಾಗಾಣೆ ವಿಚಾರದಲ್ಲಿ ಎಚ್‌ಡಿಕೆ ಕುಟುಂಬ ಶಾಮೀಲು ಎಂಬ ಮುಖ್ಯಮಂತ್ರಿಗಳ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿಗಳು ತಮ್ಮ ಹುದ್ದೆಯ ಘನತೆ ಅರಿತು ವರ್ತಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಕುಟುಂಬ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಅಕ್ರಮ ಗಣಿ, ಅದಿರು ಸಾಗಾಣೆಯಲ್ಲಿ ನಾನಾಗಲಿ, ನನ್ನ ಕುಟುಂಬದ ಸದಸ್ಯರು ಭಾಗಿಯಾದ ಬಗ್ಗೆ ಸೂಕ್ತ ಪುರಾವೆ ಇದ್ದರೆ ಇವತ್ತು ಸಂಜೆಯೊಳಗೆ ನನ್ನ ಬಂಧಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಮುಖ್ಯಮಂತ್ರಿ ಹುದ್ದೆಗೆ ಗೌರವ ತರುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಲತಾ ಕಂಪನಿ ಬಗ್ಗೆ ನನಗಿಂತ ಹೆಚ್ಚಾಗಿ ಮಾಜಿ ಸಚಿವ ಸೋಮಣ್ಣನವರಿಗೆ ಹೆಚ್ಚು ಮಾಹಿತಿ ಇದೆ. ಬಾಲಿಶ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿಗಳು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.