ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇವರು ರಾಜ್ಯದ ಅಭಿವೃದ್ದಿಗಾಗಿ ಏನು ಮಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಇಬ್ಬರೂ ನಾಯಕರು ರಾಜ್ಯದ ಅನೇಕ ಸಮಸ್ಯೆಗಳನ್ನು ಕೇಂದ್ರದಲ್ಲಿ ಪ್ರಸ್ತಾಪಿಸಬಹುದು, ಆದರೆ ಅದಾವುದನ್ನೂ ಇವರು ಮಾಡುತ್ತಿಲ್ಲವೆಂದು ಮುಖ್ಯಮಂತ್ರಿ ಆರೋಪಿಸಿದರು.
ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿಯವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸಂವಿಧಾನದ 371ನೇ ವಿ ತಿದ್ದುಪಡಿ ಬಗ್ಗೆ ರಾಜ್ಯ ಸರಕಾರ ಒತ್ತಾಯಿಸುತ್ತಲೇ ಬರುತ್ತಿದೆ. ಆದರೆ ಲೋಕಸಭೆಯಲ್ಲಿರುವ ಈ ಇಬ್ಬರೂ ನಾಯಕರು ಈ ವಿಷಯವನ್ನೇಕೆ ಪ್ರಶ್ನಿಸುತ್ತಿಲ್ಲ ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನದ ಕುರಿತಂತೆ ಇವರು ವಿಷಯ ಪ್ರಸ್ತಾಪಿಸಿದರೆ ರಾಜ್ಯಕ್ಕೆ ಹೆಚ್ಚಿನ ನೆರವು ಸಿಗುವುದಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ರಾಜ್ಯದ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಶೇಕಡಾ 50ರಷ್ಟು ಹಣವನ್ನು ಭರಿಸಲು ನಾವು ಸಿದ್ಧರಿದ್ದೇವೆ. ಆದರೆ ಕೇಂದ್ರ ಸರಕಾರ ರೈಲ್ವೆ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದು ಖರ್ಗೆ ಮತ್ತು ಧರಂಸಿಂಗ್ ಇಬ್ಬರಿಗೂ ಗೊತ್ತು. ಇವರಿಬ್ಬರೂ ಈ ವಿಷಯದ ಬಗ್ಗೆ ಚಕಾರವೆತ್ತುತಿಲ್ಲವೆಂದು ಅವರು ದೂರಿದರು.