ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕನ್ನಡ ಸಾಹಿತ್ಯದ ಕೆಲಸ ಮಾಡುವಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ದೇಶದಲ್ಲಿಯೇ ಮಾದರಿ ಎನಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಕಾಡೆಮಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು, ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ. ಕವಿತೆ ಓದುವ ಬಗ್ಗೆಯೂ ಮಾದರಿ ನೀಡಲಾಗಿದೆ ಎಂದರು.
ಕನ್ನಡ ಸಾಹಿತ್ಯದ 125 ಲೇಖಕರ ಬಗ್ಗೆ ಆರು ಪುಟಗಳಷ್ಟು ಪರಿಚಯ ಇರುವ 'ಸಾಲು ದೀಪಗಳು' ಪುಸ್ತಕ ಪ್ರಕಟಿಸಲು ಸಿದ್ಧತೆ ನಡೆದಿದೆ. ಜತೆಗೆ ಎಲ್ಲಾ ಲೇಖಕರ ಬಗ್ಗೆ ಮಾಹಿತಿಯನ್ನು ಕಂಪ್ಯೂಟರ್ ಇ ಬುಕ್‌ನಲ್ಲಿ ಅನಾವರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇ ಬುಕ್‌ನಲ್ಲಿ ಬಿ.ಎಸ್.ರೈಸ್, ಕಿಟೆಲ್ ಅವರಿಂದ ಹಿಡಿದು, ಇತ್ತೀಚೆಗೆ ಪ್ರಶಸ್ತಿ ಪಡೆದ ಬೋಳುವಾರು ಮೊಹಮದ್ ಕುಂಜಿ ತನಕ ಮಾಹಿತಿ ನೀಡಲಾಗಿದೆ ಎಂದರು.
ಶತಮಾನೋತ್ಸವ ನೆನಪು ಕಾರ್ಯಕ್ರಮದಡಿ ನಾನಾ ಭಾಗದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಬಗ್ಗೆಯೂ ತಿಳಿಸಿಕೊಡುವ, ಸಾಹಿತ್ಯ ರೂಪ ತಿಳಿಸುವ 120 ಪುಟಗಳ ಪುಸ್ತಕಗಳನ್ನು ಹೊರತರಲು ಪ್ರಯತ್ನ ನಡೆದಿದೆ.
ಸಾಹಿತ್ಯದಲ್ಲಿ ದೇಶೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ ಮಾತ್ರ ಇತ್ತು. ಈಗ ಜೈನ, ಬೌದ್ಧ, ಆಫ್ರಿಕಾದ ಸಾಹಿತ್ಯ ಮೀಮಾಂಸೆಯೂ ಲಭ್ಯವಿದೆ. ಜಗತ್ತಿನ ಶ್ರೇಷ್ಠ ಕಾದಂಬರಿಗಳ ಬಗ್ಗೆಯೂ ಕನ್ನಡದಲ್ಲಿ ಮಾಹಿತಿ ನೀಡುವ ಕೆಲಸವೂ ಆಗುತ್ತಿದೆ ಎಂದು ಹೇಳಿದರು.