ಸೋನಿಯಾ ಗಾಂಧಿ, ಎಚ್.ಆರ್. ಭಾರದ್ವಾಜ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ನಾಮರ್ಧ ಕಾಂಗ್ರೆಸಿಗರು ಎಂದು ಗೋ ಹತ್ಯೆ ನಿಷೇಧವನ್ನು ವಿರೋಧಿಸುತ್ತಿರುವ ಪ್ರತಿಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ಮುಂದುವರಿಸಿದ್ದಾರೆ.
ಗೋ ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿ ಅಂಕಿತಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಿಲಕ್, ಮಾಳವೀಯ, ರಾಜೇಂದ್ರ ಪ್ರಸಾದ್, ಗಾಂಧೀಜಿ ನಿಜವಾದ ಕಾಂಗ್ರೆಸಿಗರು; ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದವರು. ಆದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ, ಭಾರದ್ವಾಜ್ ಎಲ್ಲರೂ ನಾಮರ್ದ ಕಾಂಗ್ರೆಸಿಗರು ಎಂದು ಕಟುವಾಗಿ ಟೀಕಿಸಿದರು.
ಇಂತಹ ನಾಮರ್ದ ಕಾಂಗ್ರೆಸ್ ನಾಯಕರಿಂದ ಬಿಜೆಪಿ ಪಾಠ ಕಲಿಯುವ ಅಗತ್ಯವಿಲ್ಲ. ಆ ಪಕ್ಷದವರು ಕಸಾಯಿಖಾನೆಗೆ ಹೋಗಿ ನೋಡಿದರೆ ಅಲ್ಲಿನ ವಾಸ್ತವ ಸ್ಥಿತಿ ಅರಿವಾಗುತ್ತದೆ. ಅಲ್ಲಿನ ಪರಿಸ್ಥಿತಿ ಕಣ್ಣೀರು ತರಿಸುವಷ್ಟು ಅಮಾನವೀಯವಾಗಿದೆ. ಇದು ಅವರಿಗೆ ಅರ್ಥವಾಗಬೇಕಿದೆ ಎಂದರು.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮತಕ್ಕಾಗಿ ಗೋಹತ್ಯೆಯನ್ನು ಬೆಂಬಲಿಸುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಲ್ಲಿ ಹರಿಯುತ್ತಿರುವ ರಕ್ತದಲ್ಲಿ ಸ್ವಲ್ಪವಾದರೂ ಹಿಂದೂ ರಕ್ತ ಹರಿಯುತ್ತಿದೆ ಎಂದುಕೊಂಡಿದ್ದೇವೆ ಲೇವಡಿ ಮಾಡಿರುವ ಈಶ್ವರಪ್ಪ, ತಮ್ಮಲ್ಲಿನ ಭ್ರಮೆಯಿಂದ ಹೊರಗೆ ಬರದೇ ಇದ್ದರೆ ನಾಲ್ಕು ಜನ ಹೊತ್ತುಕೊಂಡು ಹೋಗುವ ಚಟ್ಟಕ್ಕೆ ಅವರ ಪಕ್ಷ ಸಿದ್ಧರಾಗಬೇಕು ಎಂದು ಎಚ್ಚರಿಸಿದರು.
ನಮಗೆ ಪಕ್ಷಕ್ಕಿಂತ ದೇಶ ಮತ್ತು ಸಂಸ್ಕೃತಿಯೇ ಮುಖ್ಯ. ಹಾಗಾಗಿ ಪ್ರಾಣ ಹೋದರೂ ನಾವು ಹೋರಾಟವನ್ನು ಕೈ ಬಿಡುವುದಿಲ್ಲ. ಈಗಿನ ಕಾಂಗ್ರೆಸ್ ನಾಯಕರಿಗೆ ಅಲ್ಪಸಂಖ್ಯಾತರ ಮತ ಸೆಳೆಯುವುದೇ ಮುಖ್ಯ ಉದ್ದೇಶವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿನ ಕಾಂಗ್ರೆಸ್ ನಾಯಕರು ಹೀಗಿರಲಿಲ್ಲ. ಅವರಿಗೆ ಪಕ್ಷಕ್ಕಿಂತ ದೇಶದ ಸಂಸ್ಕೃತಿಯೇ ಮುಖ್ಯವಾಗಿತ್ತು. ಅವರುಗಳ ಹೆಸರಿಗೆ ಸಿದ್ದರಾಮಯ್ಯನಂತವರು ಕಳಂಕ ತರುತ್ತಿದ್ದಾರೆ ಎಂದರು.
ರಾಜ್ಯಪಾಲರು ರಾಜಭವನವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಒಂಚೂರೂ ಗೌರವವಿಲ್ಲ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆಯೇ ಇಲ್ಲ ಎಂದು ಬಿಜೆಪಿ ಅಧ್ಯಕ್ಷರು ಆರೋಪಿಸಿದರು.