ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಹಾದ್ ಪಾಕಿಸ್ತಾನ್ ಹೆಸರಿನಲ್ಲಿ ಬೆದರಿಕೆಯ ಇ ಮೇಲ್ ಬಂದಿರುವ ಅಂಶವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಒಂದು ವಾರದ ಹಿಂದೆ ಮುಖ್ಯಮಂತ್ರಿಗಳಿಗೆ ಬೆದರಿಕೆಯ ಕರೆಯೊಂದು ಬಂದಿತ್ತು. ಆದರೆ ಸಿಎಂ ಆ ಕರೆಯನ್ನು ನಿರ್ಲಕ್ಷಿಸಿದ್ದರು. ಏತನ್ಮಧ್ಯೆಯೇ ಮತ್ತೆ ಬೆದರಿಕೆಯಇ ಮೇಲ್ ಬಂದಾಗ ಮುಖ್ಯಮಂತ್ರಿಗಳ ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿದೆ. ಜಿಹಾದ್ ಪಾಕಿಸ್ತಾನ್ ಹೆಸರಿನಲ್ಲಿ ಬಂದಿರುವ ಇ ಮೇಲ್‌ನಲ್ಲಿ ಮುಖ್ಯಮಂತ್ರಿಗಳು, ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಒಡ್ಡಲಾಗಿತ್ತು ಎನ್ನಲಾಗಿದೆ.
ಇ ಮೇಲ್ ಬಂದಿದ್ದು ಮಲ್ಲೇಶ್ವರಂನಿಂದ-ಬಿದರಿ: ಮುಖ್ಯಮಂತ್ರಿಗಳಿಗೆ ಬೆದರಿಕೆಯ ಇ ಮೇಲ್ ಬಂದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಇ ಮೇಲ್ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಇ ಮೇಲ್ ಅನ್ನು ಮಲ್ಲೇಶ್ವರಂನ ಸೈಬರ್ ಕೆಫೆಯೊಂದರಿಂದ ಆ.29ರ ಸಂಜೆ 4.30ರ ವೇಳೆಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುವ ನಿಟ್ಟಿನಲ್ಲಿ ಸ್ಥಳೀಯ ವ್ಯಕ್ತಿಯೇ ಜಿಹಾದ್ ಪಾಕಿಸ್ತಾನ್ ಹೆಸರಿನಲ್ಲಿ ಬೆದರಿಕೆಯ ಇ ಮೇಲ್ ಕಳುಹಿಸಿದ್ದು, ಈ ಬಗ್ಗೆ ತೀವ್ರ ತನಿಖೆ ನಡೆಸಿ ಯಾವ ಉದ್ದೇಶಕ್ಕಾಗಿ ಇ ಮೇಲ್ ಕಳುಹಿಸಲಾಗಿದೆ, ವ್ಯಕ್ತಿ ಯಾರು ಎಂಬುದನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುವುದು ಎಂದು ಅವರು ವಿವರಿಸಿದರು.
ಬೆದರಿಕೆಗೆ ಜಗ್ಗೋಲ್ಲ-ಯಡಿಯೂರಪ್ಪ: ಬೆದರಿಕೆಯ ಇ ಮೇಲ್ ಕುರಿತು ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಬೆದರಿಕೆಗೆ ಜಗ್ಗುವವ ನಾನಲ್ಲ. ಅನ್ಯಾಯ, ಅಕ್ರಮಗಳ ವಿರುದ್ಧ ನನ್ನ ಸಮರ ಮುಂದುವರಿಸುತ್ತೇನೆ. ನಾನು ನನ್ನ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು, ಸಾವು ಯಾವ ರೀತಿಯಲ್ಲಿಯೂ ಮನುಷ್ಯನಿಗೆ ಬರಬಹುದು. ಆದರೆ ಇಂತಹ ಗೊಡ್ಡು ಬೆದರಿಕೆಗೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ ಎಂದು ತಿರುಗೇಟು ನೀಡಿದರು.