ದಾಖಲೆ ಇದ್ದರೆ ತನಿಖೆ ನಡೆಸಿ ಜೈಲಿಗೆ ಕಳುಹಿಸಲಿ: ಎಚ್‌ಡಿಕೆ
ಗುಲ್ಬರ್ಗ, ಮಂಗಳವಾರ, 7 ಸೆಪ್ಟೆಂಬರ್ 2010( 15:21 IST )
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಮ್ಮ ಬಂಧುಗಳ ಯಾವ ಕಂಪನಿಗಳೂ ಅಕ್ರಮದಲ್ಲಿ ತೊಡಗಿಲ್ಲ. ಹಾಗೊಂದು ವೇಳೆ ಅಕ್ರಮ ಮಾಡಿರುವ ಬಗ್ಗೆ ದಾಖಲೆ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ತನಿಖೆ ನಡೆಸಿ ಜೈಲಿಗೆ ಕಳುಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿಯವರ ಸಹೋದರ ಡಾ.ರಮೇಶ್ ಒಡೆತನದ ಕಂಪನಿಗಳು ಬೇರೆ, ಬೇರೆ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ, ಸಾಗಾಣೆ ದಂಧೆಯಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಗುಲ್ಬರ್ಗದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಕುಮಾರಸ್ವಾಮಿ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಚುನಾವಣೆಯ ಆತಂಕ ಎದುರಾಗಿದೆ. ಗುಲ್ಬರ್ಗದಲ್ಲಿದ್ದು, ಗುಲ್ಬರ್ಗ ನಗರದ ಸಮಸ್ಯೆಗಳ ಮಾತನಾಡುವುದನ್ನು ಬಿಟ್ಟು ಗಣಿಗಾರಿಕೆ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಎಸ್‌ಕೆ ಕಂಪನಿ ಬಗ್ಗೆ ರೆಡ್ಡಿ ಸಹೋದರರು ಆರೋಪ ಮಾಡಿದ್ದರು. ಆಗ ನನ್ನ ಸಹೋದರ ಅಗತ್ಯ ದಾಖಲೆಯನ್ನೂ ನೀಡಿದ್ದರು. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ಯಡಿಯೂರಪ್ಪನವರ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸುವ ಮೂಲಕ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ 28 ಕಂಪನಿಗಳ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಆದರೆ ರಾಜ್ಯದಿಂದ ನಾವು ಕೇವಲ ಶಿಫಾರಸು ಮಾಡಬಹುದು. ಆದರೆ ಕೇಂದ್ರ ಸರಕಾರ ಅನುಮತಿ ನೀಡಬೇಕು. ಮುಖ್ಯಮಂತ್ರಿಗಳಿಗೆ ಅಷ್ಟೂ ಪರಿಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.