ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾದಂಬರಿಯಲ್ಲಿ ಪಾತ್ರಕ್ಕಿಂತ ರಸಾನುಭವ ಮುಖ್ಯ: ಭೈರಪ್ಪ (Bairappa | Novel | Karnataka | Mandra | Parva | Litareture)
Bookmark and Share Feedback Print
 
ಕವಲು ಕಾದಂಬರಿಯಲ್ಲಿರುವ ಪಾತ್ರಗಳು ಸಮಾಜದ ಚಿತ್ರಣಗಳಾಗಿದ್ದು ಅದನ್ನು ಮಾನಸಿಕ ಅಥವಾ ಸಾಮಾಜಿಕವಾಗಿ ಸಾರ್ವತ್ರೀಕರಣಗೊಳಿಸಬಾರದು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಗರದ ಕರ್ನಾಟಕ ಸಂಘದಲ್ಲಿ ಪ್ರತಿಭಾ ರಂಗ ಏರ್ಪಡಿಸಿದ್ದ ಕವಲು ಕೃತಿಯಲ್ಲಿ ಸಾಹಿತ್ಯಿಕ ಹೆಜ್ಜೆಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾದಂಬರಿಯಲ್ಲಿನ ಪಾತ್ರಕ್ಕಿಂತ ಅದರ ರಸಾನುಭವ ಮುಖ್ಯ. ಹಾಗಾಗಿ ಓದುಗರು ರಸಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು. ಅದನ್ನು ಕಾನೂನು ಅಥವಾ ಸಾಮಾಜಿಕ ಕಾನೂನಾಗಿ ಪರಿಗಣಿಸಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಯಾರು, ಯಾರಿಗೆ, ಯಾವಾಗ ಮತ್ತು ಎಲ್ಲಿ ಹೇಳಿದರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ತಮ್ಮ ಹಿಂದಿನ ಕೃತಿ ಆವರಣದ ಬಗ್ಗೆಯೂ ಸಾಕಷ್ಟು ಪರ, ವಿರೋಧ ವ್ಯಕ್ತವಾಯಿತು. ಆದರೆ ಅದರಲ್ಲಿನ ಪಾತ್ರಗಳನ್ನು ತಾಂತ್ರಿಕವಾಗಿ (ಹಿಸ್ಟಿಯಾಗ್ರಫಿ) ಹೇಗೆ ಭಿನ್ನ ದೃಷ್ಟಿಯಿಂದ ಹೇಳಿದ್ದಾರೆ ಎಂಬುದನ್ನು ಯಾರೂ ಗಮನಿಸಲಿಲ್ಲ. ಮಂದ್ರ ಮತ್ತು ಪರ್ವ ಕಾದಂಬರಿಯಲ್ಲೂ ಕಂಡು ಬರುವ ತಾಂತ್ರಿಕ ವಿಶ್ಲೇಷಣೆಯನ್ನು ಗಮನಿಸಿದಾಗ ಉದ್ವೇಗ ಕಡಿಮೆಯಾಗುತ್ತದೆ ಎಂದು ಹೇಳಿದರು.

ಸ್ತ್ರೀ ವಾದಿಗಳ ಬಗ್ಗೆ ಕವಲು ಕಾದಂಬರಿಯಲ್ಲಿ ತಾತ್ಸಾರ ಬರುವಂತೆ ಚಿತ್ರಿಸಲಾಗಿದೆ ಎಂಬ ಸಭಿಕರ ಪ್ರಶ್ನೆಗೆ, ಧರ್ಮ ಪಾಲನೆ ಮತ್ತು ವಂಶಾಭಿವೃದ್ದಿಯ ಉದ್ದೇಶ ಹೊಂದಿದ್ದ ಹಿಂದೂ ವಿವಾಹ ಕಾಯಿದೆಯಲ್ಲಿ ಇಂದು ಸಾಕಷ್ಟು ಬದಲಾವಣೆ ಆಗಿದೆ. ಪಾಶ್ಚಾತ್ಯ ದೇಶದಲ್ಲಿ ಆರಂಭವಾದ ಸ್ತ್ರೀವಾದ ಆಧುನಿಕ ಭಾರತದಲ್ಲೂ ಇದೆ. ಲಿವಿಂಗ್ ಟುಗೆದರ್ ಕಲ್ಪನೆ ನಮ್ಮಲ್ಲೂ ಬಂದಿದ್ದು ಸುಪ್ರೀಂಕೋರ್ಟ್ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಆದರೆ ಇದೇ ವೇಳೆ ವಿದೇಶಗಳಲ್ಲಿ ತೀವ್ರತರವಾದ ಸ್ತ್ರೀ ವಾದವನ್ನು ಅಲ್ಲಿನ ಮಹಿಳೆಯರೇ ಪ್ರತಿಭಟಿಸುತ್ತಿದ್ದಾರೆ ಎಂದರು.

ಕೌಟುಂಬಿಕ ಜೀವನದಲ್ಲಿ ಪುರುಷ ಮತ್ತು ಮಹಿಳೆಯರು ಪರಸ್ಪರ ಒಬ್ಬರನ್ನೊಬ್ಬರು ಒಲಿಸಿಕೊಳ್ಳುವುದು ಮುಖ್ಯ. ಹಾಗೆಯೇ ಇಬ್ಬರ ಲೈಂಗಿಕ ಸಾಮರ್ಥ್ಯ ಭಿನ್ನವಾಗಿರುತ್ತದೆ ಎಂಬುದೂ ಅಷ್ಟೇ ಮುಖ್ಯ. ಹಿಂದಿನ ಕಾಲದಲ್ಲಿದ್ದ ಹೆಣ್ಣಿನ ಪರವಾಗಿದ್ದ ತೆರಿಗೆ ಪದ್ಧತಿ ಬ್ರಿಟಿಷರ ಕಾಲದಲ್ಲಿ ಸರಕಾರಿ ಸಂಬಳ ಬರುವ ಉದ್ಯೋಗ ಸೃಷ್ಟಿಯಾದ ಬಳಿಕ ವರದಕ್ಷಿಣೆಯಾಗಿ ಮಾರ್ಪಟ್ಟಿತು. ಕೃಷಿ ಚಟುವಟಿಕೆಗೆ ಪೂರಕವಾಗಿದ್ದ ಹೆಣ್ಣನ್ನು ಕೆಲಸದಲ್ಲಿದ್ದ ಯುವಕನಿಗೆ ಕೊಡಲು ತಂದೆ, ತಾಯಿ ಬಯಸಿದ್ದು ಮತ್ತೊಂದು ಕಾರಣ. 1 ಮತ್ತು 2ನೇ ಮಹಾಯುದ್ದದಲ್ಲಿ ಅಪಾರ ಸಂಖ್ಯೆಯಲ್ಲಿ ಗಂಡಸರು ಮೃತಪಟ್ಟಿದ್ದು ಸ್ತ್ರೀ ವಾದಕ್ಕೆ ಪುಷ್ಟಿ ನೀಡಿತು ಎಂದು ವಿಶ್ಲೇಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ