ಗುಲ್ಬರ್ಗಾ ದಕ್ಷಿಣ, ಕಡೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಭರಾಟೆ, ಆರೋಪ-ಪ್ರತ್ಯಾರೋಪ ಬಿರುಸುಗೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಅರಸೀಕೆರೆ ಸಮೀಪ ಇರುವ ಕೋಡಿಹಳ್ಳಿ ಮಠಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಬಿಜೆಪಿ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಕೋಡಿ ಮಠದ ಸ್ವಾಮಿ ಭವಿಷ್ಯ ನುಡಿದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ವಿಧಾನಸಭೆಯ ಉಪಚುನಾವಣೆ ನಂತರ ಬಿಜೆಪಿ ಸರಕಾರ ಉರುಳುವುದು ಖಚಿತ ಎಂದು ವಿರೋಧ ಪಕ್ಷದ ನಾಯಕರು ಭವಿಷ್ಯ ನುಡಿಯುತ್ತಲೇ ಬಂದಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು, ಸಚಿವರ ಉದ್ದಟತನ ಸೇರಿದಂತೆ ರಾಜಕೀಯ ಅಲ್ಲೋಲಕಲ್ಲೋಲ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಯವರು ಈಗಾಗಲೇ ಪ್ರತಿತಂತ್ರ ರೂಪಿಸುತ್ತಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಈ ಎಲ್ಲಾ ಬೆಳವಣಿಗೆಯ ನಿಟ್ಟಿನಲ್ಲಿ ಸಿಎಂ ಕೋಡಿಹಳ್ಳಿ ಮಠಕ್ಕೆ ಭೇಟಿ ಕೊಟ್ಟು ತಮ್ಮ ಹಾಗೂ ಸರಕಾರದ ಭವಿಷ್ಯ ಏನಾಗುತ್ತೋ, ಅಪಾಯ ತಪ್ಪಿಸಿಕೊಳ್ಳಲು ಯಾವ ರೀತಿಯ ಪರಿಹಾರ ಕೈಗೊಳ್ಳಬೇಕು ಎಂದು ಸ್ವಾಮೀಜಿಗಳಿಂದ ಸಲಹೆ ಪಡೆದಿದ್ದಾರೆ ಎಂದು ಮೂಲವೊಂದು ತಿಳಿಸಿದೆ.