ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್: ಪೊಲೀಸ್ ಪೇದೆಗೆ ಧರ್ಮದೇಟು!
ಬೆಳಗಾವಿ, ಬುಧವಾರ, 8 ಸೆಪ್ಟೆಂಬರ್ 2010( 15:22 IST )
ಎಸ್ಎಂಎಸ್ ಮಾಡುವುದು, ಯುವತಿಯರಿಗೆ ಯುವಕರು, ಯುವಕರಿಗೆ ಯುವತಿಯರು ಕಾಟ ಕೊಡುವುದನ್ನು ಕೇಳಿದ್ದೀರಿ. ಆದರೆ ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದ ಪೊಲೀಸ್ ಪೇದೆಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಬುಧವಾರ ಬೆಳಗಾವಿಯಲ್ಲಿ ನಡೆದಿದೆ!
ಘಟನೆ ವಿವರ: ಕಳೆದ ನಾಲ್ಕು ತಿಂಗಳಿನಿಂದ ಕೆಲವು ಮಹಿಳೆಯರಿಗೆ ನಿರಂತರವಾಗಿ ಅಶ್ಲೀಲ ಎಸ್ಎಂಎಸ್ ಬರುತ್ತಿತ್ತು. ಇದರಿಂದಾಗಿ ಮಹಿಳೆಯರು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದರು. ಆದರೆ ಎಸ್ಎಂಎಸ್ ಕಳುಹಿಸುತ್ತಿದ್ದಾತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಆತ ಅದನ್ನು ಸ್ವೀಕರಿಸುತ್ತಿರಲಿಲ್ಲ. ಹಾಗಾದರೆ ಎಸ್ಎಂಎಸ್ ಕಳುಹಿಸುತ್ತಿರುವ ವ್ಯಕ್ತಿ ಯಾರು ಎಂಬುದು ಮಹಿಳೆಯರಿಗೆ, ಮನೆಯವರಿಗೆ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತ್ತು.
ಅಂತೂ ಕೊನೆಗೂ ಮೊಬೈಲ್ ನಂಬರ್ ಯಾರೆದ್ದೆಂದು ಪತ್ತೆ ಹಚ್ಚಿದಾಗ, ಅದು ಸಶಸ್ತ್ರ ಮೀಸಲು ಪಡೆಯ (ಸಿಆರ್‌ಪಿಎಫ್) ಪೊಲೀಸ್ ಪೇದೆ ಬಸವರಾಜ್ ಎಸ್.ಕೋಲಕಾರ್ ಎಂಬಾತನದ್ದು ಎಂದು ಮಾಹಿತಿ ಪಡೆದಿದ್ದರು. ನಂತರ ಪೊಲೀಸ್ ಕ್ವಾಟ್ರರ್ಸ್‌ಗೆ ಬಂದು ವಿಚಾರಿಸಿದಾಗ ಬಸವರಾಜ್ ತಾನೇ ಎಸ್ಎಂಎಸ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದ.
ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್ ಮಾಡುತ್ತಿರುವುದನ್ನು ಒಪ್ಪಿಕೊಂಡ ಪೇದೆಗೆ ಆಕ್ರೋಶಿತ ಸಾರ್ವಜನಿಕರು ಧರ್ಮದೇಟು ನೀಡಿದರು. ನನ್ನ ಕ್ಷಮಿಸಿ, ತಪ್ಪಾಯಿತು. ಮಿಸ್ ಕಾಲ್ ಬಂದಿದ್ದರಿಂದ ನಾನು ಎಸ್ಎಂಎಸ್ ಕಳುಹಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದ. ಮಿಸ್ ಕಾಲ್ ಬಂದ್ರೆ ಅಶ್ಲೀಲ ಎಸ್ಎಂಎಸ್ ಮಾಡುವ ಅಗತ್ಯ ಏನಿತ್ತು? ಎಂದು ತರಾಟೆಗೆ ತೆಗೆದುಕೊಂಡು ಥಳಿಸಿದರು. ನಂತರ ಪೇದೆ ಬಸವರಾಜ್‌ನನ್ನು ಮಾಳ ಮಾರುತಿ ಠಾಣೆಗೆ ಒಪ್ಪಿಸಿದ್ದಾರೆ.