ಪಾದಯಾತ್ರೆ ಮಾಡಿದ ಕಾಂಗ್ರೆಸ್ ನಾಯಕರಿಗಾಗಿ ಸುಸಜ್ಜಿತ ಜೈಲು ನಿರ್ಮಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ನ್ಯಾಯಾಧೀಶರಾಗಿದ್ದು ಯಾವಾಗ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಖಾರವಾಗಿ ಪ್ರಶ್ನಿಸಿದ್ದಾರೆ.
ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಪರ ಕಳೆದ ಎರಡು ದಿನಗಳಿಂದ ಪ್ರಚಾರ ಕೈಗೊಂಡಿರುವ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ನಿಜ. ಅವ್ಯವಹಾರ, ಭ್ರಷ್ಟಾಚಾರ ನಡೆದಾಗ ತನಿಖೆ ನಡೆಸಲಿ, ವರದಿ ಪಡೆಯಲಿ, ತನಿಖಾ ಅಧಿಕಾರಿ ನೀಡುವ ವರದಿಗೆ ಅಸಮಾಧಾನ ವ್ಯಕ್ತಪಡಿಸಲಿ ಇದೆಲ್ಲ ಸರಿ. ಆದರೆ ನ್ಯಾಯಾಧೀಶರಂತೆ ತೀರ್ಪು ನೀಡುವ ಅಧಿಕಾರ ಇವರಿಗೆ ಯಾರು ಕೊಟ್ಟರು ಎಂದು ಕಿಡಿಕಾರಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ವರದಿ ನೀಡುವ ಮೊದಲೇ ತನಿಖೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ದಿನಕ್ಕೊಂದು ಹೇಳಿಕೆ ನೀಡುವ ಮುಖ್ಯಮಂತ್ರಿ ವರ್ತನೆ ನೋಡಿದರೆ ರಾಜ್ಯದ ಯಾವ ಇಲಾಖೆಯ ಮೇಲೂ ಮುಖ್ಯಮಂತ್ರಿಯವರಿಗೆ ಹಿಡಿತವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ದಿವಂಗತ ಚಂದ್ರಶೇಖರ ಪಾಟೀಲ ರೇವೂರರ ಪತ್ನಿ, ಮಗನನ್ನು ಬಿಟ್ಟು, ಈಗಾಗಲೇ ಅಧಿಕಾರದಲ್ಲಿರುವ ಶಶೀಲ್ ನಮೋಶಿಯವರಿಗೆ ಟಿಕೆಟ್ ನೀಡಿರುವ ಚಿದಂಬರ ರಹಸ್ಯವನ್ನು ಈ ಜಿಲ್ಲೆ, ಕ್ಷೇತ್ರದ ಮತದಾರರ ಮುಂದೆ ಬಿಚ್ಚಿಡಬೇಕು ಎಂದು ಮುಖ್ಯಮಂತ್ರಿಯವರಿಗೆ ಸವಾಲು ಹಾಕಿದರು.
ಖರ್ಗೆ, ಧರ್ಮಸಿಂಗ್ ಅವರನ್ನು ಸದಾ ಟೀಕಿಸುವ ಮುಖ್ಯಮಂತ್ರಿ, ಇಲ್ಲಿಯವರೆಗೆ ದತ್ತು ಪಡೆದಿರುವ ಕ್ಷೇತ್ರದಲ್ಲಿ ಯಾವ ಯಾವ ಅಭಿವೃದ್ದಿ ಮಾಡಿದ್ದಾರೆ, ಎಷ್ಟು ಬಾರಿ ಆ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದರು. ಇವರು ನುಡಿದಂತೆ ನಡೆಯುವ ಮುಖ್ಯಮಂತ್ರಿಯಲ್ಲವೇ ಎಂದು ಡಿಕೆಶಿ ವ್ಯಂಗ್ಯವಾಡಿದರು.