ಗಣಿಗಾರಿಕೆ ವಿಷಯ ಎತ್ತಿದರೆ ಜನ ಟಿವಿ ಬಂದ್ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅದರ ಬಗ್ಗೆ ಮಾತನಾಡಲು ನಾನು ಸಹ ಮಾತನಾಡಲಾರೆ ಎಂದು ಗಣಿ ಧಣಿ, ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಇಲಾಖೆಗಳ ಸಭೆ ನಡೆಸಲು ಬಂದಿರುವ ತಾವು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದರು.
ರಾಜ್ಯ ಸರಕಾರ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಕಿತ್ತೂರು ಕೋಟೆಗೆ ಧ್ವನಿ ಮತ್ತು ಬೆಳಕಿನ ಯೋಜನೆಗೆ ಎರಡು ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿದೆ. ದೇಸೂರಿನಲ್ಲಿರುವ ಪ್ರವಾಸೋದ್ಯಮ ಇಲಾಖೆ ಜಮೀನು ಹಾಗೂ ಹೊನ್ನಾವರ ಬಳಿಯ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮೂಲಕ ರೆಸಾರ್ಟ್ ನಿರ್ಮಿಸಲಾಗುವುದು. ವಿಶ್ವ ಪರಂಪರೆ ತಾಣವಾದ ಪಟ್ಟದಕಲ್ಲು, ಬಾದಾಮಿ, ಐಹೊಳೆ ಒಳಗೊಂಡಂತೆ 148 ಕೋಟಿಗಳ ಮೆಗಾ ಸರ್ಕ್ಯೂಟ್ ಯೋಜನೆ ತಯಾರಿಸಿ ಕೇಂದ್ರ ಸರಕಾರದ ಧನಸಹಾಯ ಕೋರಿ ಪ್ರವಾಸೋದ್ಯಮ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಿಜಾಪುರದಲ್ಲಿ ಧ್ವನಿ, ಬೆಳಕಿನ ಯೋಜನೆಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಸ್ಥಳದಲ್ಲಿ ಹೆಲಿಟ್ಯೂರಿಸಂ ಅಡಿ ಪ್ರವಾಸಿಗರನ್ನು ಕರೆ ತರಲು ಯೋಜಿಸಲಾಗಿದೆ ಎಂದ ಅವರು, ಕೇಂದ್ರ- ರಾಜ್ಯ ಸರಕಾರದ ಅನುದಾನದಲ್ಲಿ ಜಂಗಲ್ ಕ್ಯಾಂಪ್‌ಗಳು ಮತ್ತು ಟ್ರೈಲ್ಸ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.