ಅಕ್ರಮ ಗಣಿಗಾರಿಕೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿರುದ್ಧದ ಆರೋಪ ಕೈಬಿಟ್ಟಿರುವ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದು, ಅದಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪತ್ರದ ಮೂಲಕ ತಾಕೀತು ಮಾಡಿದ್ದಾರೆ.
ಮುಖ್ಯಮಂತ್ರಿಗಳಾಗಲಿ ಅಥವಾ ಸಚಿವರಾಗಲಿ ತಮ್ಮ ಕರ್ತವ್ಯದ ಹದ್ದು ಮೀರಿ ನಡೆದುಕೊಳ್ಳಬಾರದು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ. ರಾಜ್ಯಪಾಲರ ಹುದ್ದೆಗೆ ಅಗೌರವ ತೋರುವಂತೆ ನಡೆದುಕೊಂಡರೆ ಸಂವಿಧಾನ ಪ್ರಕಾರ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ವಿರುದ್ಧದ ಆರೋಪ ಕೈಬಿಟ್ಟ ವಿಷಯದಲ್ಲಿ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ಷಮೆಯಾಚಿಸುವಂತೆಯೂ ಹೇಳಿದ್ದಾರೆ.
ತಾನು 2009ರ ಆಗಸ್ಟ್‌ನಲ್ಲಿ ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಆದರೆ ಹಿಂದಿನ ರಾಜ್ಯಪಾಲರಾದ ರಾಮೇಶ್ವರ್ ಠಾಕೂರ್ ಅವರು ಮೌಖಿಕ ಆದೇಶದ ಪ್ರಕಾರ ಲೋಕಾಯುಕ್ತ ವರದಿಯಲ್ಲಿನ ಧರಂಸಿಂಗ್ ವಿರುದ್ಧದ ಆರೋಪ ಕೈಬಿಟ್ಟಿದ್ದರು. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಮುಖ್ಯಮಂತ್ರಿಗಳು ಜನರ ಹಾದಿ ತಪ್ಪಿಸುವ ನಿಟ್ಟಿನಲ್ಲಿ ನನ್ನ ಹೆಸರನ್ನು ಎಳೆದು ತರುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡಿಲ್ಲ-ಸಿಎಂ: ಮುಖ್ಯಮಂತ್ರಿಗಳ ಹೇಳಿಕೆಗೆ ರಾಜ್ಯಪಾಲರು ಗರಂ ಆಗುತ್ತಿರುವಂತೆಯೇ ಯಡಿಯೂರಪ್ಪ ಅದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಹಾಲಿ ರಾಜ್ಯಪಾಲರ ವಿರುದ್ದ ಯಾವುದೇ ಹೇಳಿಕೆ ನೀಡಿಲ್ಲ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಮಾಧ್ಯಮಗಳಿಂದಲೇ ಅಪಪ್ರಚಾರ ಎಂದು ಸಮಜಾಯಿಷಿ ನೀಡಿದ್ದಾರೆ.
ಕ್ಷಮೆ ಕೇಳಲ್ಲ-ಈಶ್ವರಪ್ಪ ತಿರುಗೇಟು: ರಾಜ್ಯಪಾಲರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಜ್ಯಪಾಲರ ವಿಷಯದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ವಾಗ್ದಾಳಿಯ ಸಮರವನ್ನು ಮುಂದುವರಿಸಿದ್ದಾರೆ.