ಗುಲ್ಬರ್ಗಾ, ಗುರುವಾರ, 9 ಸೆಪ್ಟೆಂಬರ್ 2010( 11:49 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಯಕ್ಕೆ ತಕ್ಕಂತೆ ನಾಟಕ ಆಡುತ್ತಿದ್ದಾರೆ. ಮೂರು ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂಬ ಹಠದೊಂದಿಗೆ ಬಿಜೆಪಿ ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು ಜೆಡಿಎಸ್ ಜಾತಿ ರಾಜಕಾರಣದ ಮೇಲೆ ಮತ ಯಾಚಿಸುವುದಿಲ್ಲ ಎಂದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಬಿಜೆಪಿ ಜಾತಿ ಆಧಾರದ ಮೇಲೆ ಮತ ಯಾಚಿಸುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಮ್ಮಕ್ಕೂ ಇದೆ ಎಂದು ದೂರಿದರು. ಪಕ್ಷದ ಬದ್ದತೆ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದರು.