ರಾಜ್ಯದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳಿಯೇ ರಾಜಕಾರಣ ಮಾಡುವುದು ಬಿಜೆಪಿಯ ಜಾಯಮಾನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕಡೂರು ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಡೂರು ವಿಧಾನಸಭೆ ಕ್ಷೇತ್ರವನ್ನು ದತ್ತು ಪಡೆಯುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಸಚಿವ ಸಹೋದ್ಯೋಗಿಗಳು ಸಾಥ್ ಕೊಟ್ಟಿದ್ದಾರೆ. ಈ ಹಿಂದೆ ಕಡೂರು ಕ್ಷೇತ್ರವನ್ನು ದತ್ತುಪಡೆಯುವುದಾಗಿ ಹೇಳಿ ಯಡಿಯೂರಪ್ಪ ಮಾತು ತಪ್ಪಿರುವುದು ಜನರ ನೆನಪಿನಲ್ಲಿದೆ ಎಂದು ವ್ಯಂಗ್ಯವಾಡಿದರು.
ಉಪ ಚುನಾವಣೆ ಮುಗಿದ ಕೂಡಲೇ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ತೀವ್ರಗೊಳಿಸಲಿದೆ ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದರು.