ಉಪ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಅಸ್ವಸ್ಥರಾಗಿ ಕುಸಿದು ಕುಳಿತ ಘಟನೆ ಬುಧವಾರ ಗುಲ್ಬರ್ಗದಲ್ಲಿ ನಡೆಯಿತು.
ತಕ್ಷಣವೇ ಅವರಿಗೆ ಸಮೀಪದಲ್ಲೇ ಇದ್ದ ಕಾಂಗ್ರೆಸ್ ಮುಖಂಡರು ಕುಡಿಯಲು ನೀರು ಕೊಟ್ಟರು. ನಂತರ ಬಂಗಾರಪ್ಪನವರು ಮಾಲೀಕಯ್ಯ ಗುತ್ತೇದಾರ್ ಅವರ ನಿವಾಸದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದರು.
ಗುತ್ತೇದಾರ ಮನೆಗೆ ಆಗಮಿಸಿದ ವೈದ್ಯ ಡಾ. ಹರವಾಳಕರ್ ಪರೀಕ್ಷಿಸಿ ಏನೂ ತೊಂದರೆ ಇಲ್ಲ ಎಂದು ಹೇಳಿದರು. ಈಗ ಅವರ ಆರೋಗ್ಯ ಸುಧಾರಣೆಯಾಗಿದೆ. ಹೀಗಾಗಿ ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದರು.
ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಂಗಾರಪ್ಪ, ನನಗೆ ಏನೂ ತೊಂದರೆ ಆಗಿಲ್ಲ. ಆರೋಗ್ಯವಂತನಾಗಿಯೇ ಇದ್ದೇನೆ. ಬೆಳಿಗ್ಗೆ ಉಪಹಾರ ಸೇವಿಸದಿದ್ದ ಪರಿಣಾಮ ನಿತ್ರಾಣವಾಗಿರುವುದಾಗಿ ಹೇಳಿದರು. ನಾನೊಬ್ಬ ಕ್ರೀಡಾಪಟು ಮತ್ತು ಈಜುಗಾರ, ನನಗೆ ಹೀಗೇಕಾಯಿತೋ ಎನ್ನುವುದೇ ನನಗೆ ಗೊತ್ತಾಗಲಿಲ್ಲ ಎಂದು ಅವರು ನಗುತ್ತಲೇ ಆಶ್ಚರ್ಯ ವ್ಯಕ್ತಪಡಿಸಿದರು.