ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಇನ್ನೂ ಮುಂದುವರಿಯಲು ಕಾಂಗ್ರೆಸ್-ಬಿಜೆಪಿ ಪಕ್ಷಗಳ ಒಳ ಒಪ್ಪಂದ ಕಾರಣ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅರುಣಾ ಚಂದ್ರಶೇಖರ ಪಾಟೀಲ್ ರೇವೂರ ಪರ ಎರಡು ದಿನಗಳ ಕಾಲ ನಗರದ ನಾನಾ ಕಡೆಗಳಲ್ಲಿ ಪ್ರಚಾರ ನಡೆಸುತ್ತಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪರವಾನಿಗೆ ಇಲ್ಲದೇ ಒಂದೇ ಒಂದು ಚೂರು ಅದಿರು ರಫ್ತು ಆಗಲ್ಲ ಎಂಬುದು ಅರಿತುಕೊಳ್ಳಲಿ, ಸಾಗಣೆ ನಡೆಯುತ್ತಿದ್ದು ಪರವಾನಿಗೆ ನೀಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಸುಳ್ಳು ಹೇಳಿ ಜನರಿಗೆ ವಂಚನೆ ಮಾಡುವುದು ಬಿಟ್ಟು ಯಡಿಯೂರಪ್ಪ ಸಿಬಿಐ ತನಿಖೆಗೆ ಮುಂದಾಗಲಿ. ಪ್ರಧಾನಿ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಗೃಹ ಸಚಿವ ಚಿದಂಬರಂಗೆ ಪತ್ರ ಬರೆದು ಮನವರಿಕೆ ಮಾಡಿಕೊಡಲಿ, ಕೇಂದ್ರೀಯ ಸುಂಕ, ಅಬಕಾರಿ ಅಧಿಕಾರಿಗಳಿಗೆ ತಿಳಿಸಲಿ ಅದು ಬಿಟ್ಟು ಕೇವಲ ಹೇಳಿಕೆ ನೀಡಿದರೆ ಸಾಲದು ಎಂದು ತಿರುಗೇಟು ನೀಡಿದರು.
ಕ್ರಮ ಗಣಿಕೆಗಾರಿಕೆ ಕುರಿತು ನಾನು ಲೋಕಸಭೆ ಅಧಿವೇಶನದಲ್ಲಿ 19(3) ಅಡಿಯಲ್ಲಿ ಚರ್ಚಿಸಿ ಧ್ವನಿ ಎತ್ತಿದಾಗ ಕಾಂಗ್ರೆಸ್‌ನವರು ಮಾತನಾಡಲಿಲ್ಲ, ಬಿಜೆಪಿಯ ಅನಂತಕುಮಾರ ಇತರರು ಸದನದಿಂದ ಹೊರಗೆ ಬಂದರು. ಇದು ನೋಡಿದರೆ ಗೊತ್ತಾಗುತ್ತದೆ ಬಿಜೆಪಿ-ಕಾಂಗ್ರೆಸ್ ಒಂದೆ ನಾಣ್ಯದ ಎರಡು ಮುಖಗಳು ಎಂದು ದೂರಿದರು.
ರಾಜ್ಯದಲ್ಲಿ ಅದಿರು ಸಾಗಣೆ ನಿಷೇಧ ಮಾಡಿದ್ದೇನೆ ಎಂದು ಜಂಬ ಕೊಚ್ಚಿಕೊಳ್ಳುವ ಯಡಿಯೂರಪ್ಪ, ಮೊದಲು ಅವರ ಕಣ್ಣೆದುರಿನಲ್ಲಿಯೇ ಅಕ್ರಮ ಸಾಗಣೆ ನಡೆದಿದೆ ಎಂಬುದು ನೋಡಲಿ, ಮಾಧ್ಯಮಗಳು ಸಹ ವರದಿ ಮಾಡಿವೆ. ನಾವು ಸಹ ಧ್ವನಿ ಎತ್ತಿದ್ದೇವೆ ಆದರೂ ಅದನ್ನು ನಿಯಂತ್ರಿಸಲು ಕ್ರಮ ಕೈಗೊಂಡಿಲ್ಲ, ಉತ್ತರವೂ ನೀಡಿಲ್ಲ ಇಂತಹವರಿಗೆ ಏನು ಎನ್ನಬೇಕು ಎಂದು ದೇವೇಗೌಡರು ಪ್ರಶ್ನಿಸಿದರು.