ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಂತ್ರಿಗಿರಿ ಕೊಡಿ, ಇಲ್ಲಾಂದ್ರೆ ನನ್ನ ದಾರಿ ನಂಗೆ: ಬೇಳೂರು (Beluru Gopalakrishna | Sagara | KS Eshwarappa | BJP)
Bookmark and Share Feedback Print
 
ಎಂ.ಪಿ. ರೇಣುಕಾಚಾರ್ಯ ಅವರು ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಸಚಿವರಾದ ನಂತರ ಅದೇ ಸಾಲಿಗೆ ಸೇರ್ಪಡೆಯಾಗುವ ಲಕ್ಷಣಗಳನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೋರಿಸುತ್ತಿದ್ದಾರೆ. ನನಗೆ ಮಂತ್ರಿಯಾಗಲು ಎಲ್ಲಾ ರೀತಿಯ ಅರ್ಹತೆಗಳೂ ಇವೆ, ಹಾಗಾಗಿ ತನಗೆ ಸಚಿವ ಸ್ಥಾನ ನೀಡಲೇ ಬೇಕು. ನೀಡದಿದ್ದರೆ ಮುಂದಿನ ದಾರಿ ಗೊತ್ತಿದೆ ಎಂದು ಸರಕಾರಕ್ಕೆ ಪರೋಕ್ಷ ಬೆದರಿಕೆ ಹಾಕಿದ್ದಾರೆ.

ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಬೇಳೂರು, ಮಂತ್ರಿಯಾಗಲು ನನಗೆ ಎಲ್ಲಾ ರೀತಿಯ ಅರ್ಹತೆಗಳೂ ಇವೆ. ಖಾತೆ ನಿರ್ವಹಣೆ ಮಾಡುವ ಸಾಮರ್ಥ್ಯವೂ ಇದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ನೀಡಲೇಬೇಕು. ಒಂದು ವೇಳೆ ನೀಡದಿದ್ದರೆ ಮುಂದಿನ ದಾರಿ ಗೊತ್ತಿದೆ ಎಂದರು.

ಈ ರೀತಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಬೆದರಿಕೆ ಹಾಕಿರುವ ಬೇಳೂರು, ತಾನು ಸಚಿವ ಸ್ಥಾನಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧನಿದ್ದೇನೆ ಎಂಬ ಮಾರ್ಮಿಕ ಮಾತನ್ನೂ ಆಡಿದರು.

ನನಗೆ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರ ಬೆಂಬಲವಿದೆ. ಸಂಪುಟದಲ್ಲಿ ಹೇಗೂ ಸಚಿವ ಸ್ಥಾನ ಖಾಲಿ ಇದೆ. ಅದನ್ನು ನನಗೇ ನೀಡಲಿ ಎಂದರು.

ಹರತಾಳು ಹಾಲಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಡಿಗ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲ. ಬಿಜೆಪಿಯ ಹಲವು ಏಳ್ಗೆಗಳಿಗೆ ಈಡಿಗರು ಕಾರಣ. ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಹಲವೆಡೆ ನಮ್ಮ ಸಮುದಾಯ ಪ್ರಬಲವಾಗಿದೆ ಎಂದು ತನ್ನ ವಾದಕ್ಕೆ ಬೇಳೂರು ಸಮರ್ಥನೆಯನ್ನೂ ನೀಡಿದರು.

ಖಾಲಿಯಿರುವ ಸ್ಥಾನವನ್ನು ಮಾಜಿ ಸಚಿವ ಹಾಲಪ್ಪನವರಿಗೆ ಮರಳಿ ನೀಡಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಸಮುದಾಯದ ಇತರ ಶಾಸಕರಿಗೆ ನೀಡಿದರೆ ಎಂದಿದ್ದಕ್ಕೆ, ನಮ್ಮ ಸಮುದಾಯದಲ್ಲಿ ನಾನೇ ಸಮರ್ಥ ಅಭ್ಯರ್ಥಿ ಎಂದರು.

ರೆಡ್ಡಿಗಳ ಸಹವಾಸ ಮಾಡಬಾರದಿತ್ತು...
ಸತ್ಯವಾಗಿ ಹೇಳುತ್ತೇನೆ, ಆ ರೆಡ್ಡಿ ಸಹೋದರರ ಸಹವಾಸ ಮಾಡಿದ್ದು ನನ್ನಿಂದಾದ ತಪ್ಪು. ಮುಂದೆ ಅವರ ಸಹವಾಸಕ್ಕೇ ನಾನು ಹೋಗುವುದಿಲ್ಲ ಎಂದು ಒಂದು ಕಾಲದಲ್ಲಿ ಬಳ್ಳಾರಿ ಸಚಿವರುಗಳಿಗೆ ಆಪ್ತರಾಗಿದ್ದ ಬೇಳೂರು ಪಶ್ಚಾತಾಪ ಪಟ್ಟಿದ್ದಾರೆ.

ಅವರ ಮಾತು ನಂಬಿ ನಾನೂ ಹೈದರಾಬಾದ್‌ಗೆ ಹೋಗಿದ್ದೆ. ಅದು ತಪ್ಪು. ಅವರ ಬಗ್ಗೆ ಮುಂದಿನ ದಿನಗಳಲ್ಲಿ ಏನೂ ಮಾತನಾಡಲಾರೆ. ಅವರ ಸಹವಾಸ ಸಾಕಾಗಿದೆ ಎಂದರು.

ನಿಮ್ಮನ್ನು ಮಂತ್ರಿ ಮಾಡುವ ಭರವಸೆಯನ್ನು ರೆಡ್ಡಿ ಸಹೋದರರು ನೀಡಿದ್ದರಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಯಾವುದೇ ಉತ್ತರ ನೀಡದೆ ಜಾರಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ