ಅಕ್ರಮ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕ್ಷಮೆಯಾಚಿಸುವಂತೆ ಪತ್ರ ಬರೆದ ಬೆನ್ನಲ್ಲೇ, ಮುಖ್ಯಮಂತ್ರಿಗಳು ಯಾಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರೇ ಮುಖ್ಯಮಂತ್ರಿ ಬಳಿ ಕ್ಷಮೆಯಾಚಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರು ಅವರ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ, ನಾನು ಬೇರೆ ರೀತಿಯ ಭಾಷೆಯನ್ನು ಬಳಸಬೇಕಾಗುತ್ತದೆ ಎಂದ ಅವರು ನನಗೆ ರಾಜ್ಯಪಾಲರ ಬಗ್ಗೆ ಗೌರವವಿದೆ. ಈಗಾಗಲೇ ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೂ ರಾಜ್ಯಪಾಲರು ತಮ್ಮ ಟೀಕೆ ಮುಂದುವರಿಸಿರುವುದು ಸರಿಯಲ್ಲ. ಆ ನಿಟ್ಟಿನಲ್ಲಿ ರಾಜ್ಯಪಾಲರೇ ಬಹಿರಂಗ ಕ್ಷಮೆಯಾಚಿಸಬೇಕು ಎಂದರು.
ರಾಜ್ಯಪಾಲರ ಹುದ್ದೆಗೆ ಸಂವಿಧಾನಬದ್ಧವಾದ ಗೌರವವಿದೆ. ಸರಕಾರ ಕೂಡ ಅವರನ್ನು ಗೌರವಿಸುತ್ತದೆ. ಅದನ್ನು ಬಿಟ್ಟು ಒಂದು ಪಕ್ಷದ ವಕ್ತಾರರಂತೆ ವರ್ತಿಸುವುದು ಸರಿಯಲ್ಲ. ಪದೇ, ಪದೇ ಸರಕಾರದ ವಿರುದ್ಧ ಮುಖ್ಯಮಂತ್ರಿಗಳ ಬಗ್ಗೆ ವಾಗ್ದಾಳಿ ನಡೆಸುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಆಡಳಿತದಲ್ಲಿ ತಪ್ಪಾಗಿದ್ದಲ್ಲಿ ಸರಕಾರಕ್ಕೆ ರಾಜ್ಯಪಾಲರು ಸಲಹೆ ನೀಡಲಿ. ಅದನ್ನು ಬಿಟ್ಟು ಟೀಕಿಸುವುದನ್ನೇ ಮುಂದುವರಿಸುವುದಾದರೆ ಅವರು ಮೊದಲು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಲಿ. ನಂತರ ಕೆಪಿಸಿಸಿ ಅಧ್ಯಕ್ಷರಾಗಿ ವಾಗ್ದಾಳಿ ನಡೆಸಲಿ ಎಂದು ವ್ಯಂಗ್ಯವಾಡಿದರು.