ಗುಲ್ಬರ್ಗ, ಶುಕ್ರವಾರ, 10 ಸೆಪ್ಟೆಂಬರ್ 2010( 15:15 IST )
ಅಕ್ರಮ ಗಣಿಗಾರಿಕೆಗೆ ಅಂತ್ಯ ಹಾಡಲು ಅಕ್ಟೋಬರ್ ಮೊದಲ ವಾರ ವಿಪಕ್ಷಗಳ ಸಭೆ ಕರೆಯಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಪ್ರಮುಖರನ್ನು ಆಹ್ವಾನಿಸಿ ಸಲಹೆ, ಸೂಚನೆ ಪಡೆಯಲಾಗುವುದು. ಅಕ್ರಮ ಗಣಿಗಾರಿಕೆ, ಅದಿರು ರಫ್ತು ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರಕಾರದ ಬಳಿ ಲಭ್ಯವಿರುವ ಮಾಹಿತಿ, ದಾಖಲೆ ಒದಗಿಸುತ್ತೇವೆ. ಪ್ರತಿಪಕ್ಷಗಳ ಬಳಿ ಲಭ್ಯವಿರುವ ದಾಖಲೆ ಅವರು ಒದಗಿಸಲಿ. ಮುಕ್ತ ಚರ್ಚೆಯ ನಂತರ ಒಟ್ಟಾಭಿಪ್ರಾಯಕ್ಕೆ ಬರುವ ಅಗತ್ಯವಿದೆ. ಈಗಾಗಲೇ ಅಕ್ರಮ ಗಣಿಗಾರಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಅದಿರು ರಫ್ತು ನಿಷೇಧ ಮಾಡಲಾಗಿದೆ ಎಂದರು.
ಪೂರ್ಣ ಪ್ರಮಾಣದಲ್ಲಿ ಅದಿರು ಸಾಗಿಸುವ ಲಾರಿಗಳಿಗೆ 30 ದಿನಕ್ಕೆ ಪರವಾನಿಗೆ ನೀಡಲಾಗುತ್ತಿತ್ತು. ಇದೀಗ ಅದನ್ನು 9 ದಿನಕ್ಕೆ ನಿಗಿದ ಮಾಡಲಾಗಿದೆ. ಇದರಿಂದಾಗಿ ವಹಿವಾಟಿನ ಲೆಕ್ಕ ಪೂರ್ತಿಯಾಗಿ ಸಿಗಲಿದೆ. ನಿಯಂತ್ರಣ ಮಾಡಲು ಅನುಕೂಲವಾಗಲಿದೆ. ಪ್ರತಿ ಲಾರಿಗೆ 500 ರೂ. ಶುಲ್ಕ ಭರಿಸಲು ಸೂಚಿಸಲಾಗಿದೆ. ಅದಕ್ಕಾಗಿ ಚೆಕ್ ಪೋಸ್ಟ್‌ಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಧರಂಸಿಂಗ್, ದೇವೇಗೌಡರ ಅವಧಿಯಲ್ಲೂ ಅದಿರು ರಫ್ತು ಆಗಿದೆ. ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಯಾವ ಏಜೆನ್ಸಿ ಮೂಲಕ ತನಿಖೆ ಮಾಡಿಸಲೂ ತಾವು ಸಿದ್ಧ ಎಂದರು.