ಕಾಂಗ್ರೆಸ್, ಜೆಡಿಎಸ್ ಬಿಕ್ಕಟ್ಟು ಬಿಜೆಪಿಗೆ ಲಾಭ: ಅನಂತ್ ಕುಮಾರ್
ಗುಲ್ಬರ್ಗ, ಶುಕ್ರವಾರ, 10 ಸೆಪ್ಟೆಂಬರ್ 2010( 15:19 IST )
ಬಿಜೆಪಿಯಲ್ಲಿ ಒಗ್ಗಟ್ಟು, ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು, ಜೆಡಿಎಸ್‌ನಲ್ಲಿ ಇಕ್ಕಟ್ಟು ಹೀಗಾಗಿ ಗುಲ್ಬರ್ಗ ದಕ್ಷಿಣ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಸಂಸದ ಅನಂತ ಕುಮಾರ್ ವಿಶ್ವಾಸವ್ಯಕ್ತಪಡಿಸಿದರು.
ಗುಲ್ಬರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಲೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಾಡಿದ ಜನಪರ, ಅಭಿವೃದ್ಧಿ ಪರ ಕೆಲಸ ಶ್ರೀರಕ್ಷೆ. ಹೀಗಾಗಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಈ ರಾಜ್ಯದ ಜನತೆ ಬಿಜೆಪಿ ಅಧಿಕಾರಕ್ಕೆ ತರಲು ಆದೇಶ ನೀಡಿದರು. ಆ ನಂತರ ನಡೆದ ಉಪ ಚುನಾವಣೆ, ಲೋಕಸಭೆ ಚುನಾವಣೆ, ಬಿಬಿಎಂಪಿ ಹೀಗೆ ಎಲ್ಲದರಲ್ಲೂ ಪಕ್ಷ ಗೆಲುವು ಸಾಧಿಸಿದೆ. ಅಭಿವೃದ್ಧಿ ಪರ ಮತ ಹಾಕಲು ಜನತೆ ನಿರ್ಧರಿಸಿದ್ದಾರೆ. ಗುಲ್ಬರ್ಗ ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶೇಷ ಪ್ಯಾಕೇಜ್ ನೀಡಿದ್ದಾರೆ.
ಕ್ಷೇತ್ರದ ಜನ ಪ್ರಜ್ಞಾವಂತರು. ಈ ಪ್ರಚಾರ, ಅಪಪ್ರಚಾರದ ಭರಾಟೆ ಮಧ್ಯೆಯೂ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ. ಕಡೂರು ಮತಕ್ಷೇತ್ರ 8 ಕಡೆ ನಡೆದ ಸಭೆ, ಸಮಾರಂಭದಲ್ಲೂ ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಡೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗತ್ತು, ಜೆಡಿಎಸ್ ಗಮ್ಮತ್ತು, ಬಿಜೆಪಿ ನಿಯತ್ತು ಕೆಲಸ ಮಾಡಲಿದೆ ಎಂದರು.