ಅಲ್ಪಸಂಖ್ಯಾತರ ಅಭಿವೃದ್ದಿಗೆ ವಿಶೇಷ ಯೋಜನೆ: ಸಲ್ಮಾನ್ ಖುರ್ಷಿದ್
ಗುಲ್ಬರ್ಗ, ಶುಕ್ರವಾರ, 10 ಸೆಪ್ಟೆಂಬರ್ 2010( 15:23 IST )
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ 2,600 ಕೋಟಿ ರೂ. ಬಿಡುಗಡೆ ಮಾಡಿ ನಾನಾ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
ಗುಲ್ಬರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ ಸಿಂಗ್ ಪರ ನಗರದ ನಾನಾ ಕಡೆಗಳಲ್ಲಿ ಪ್ರಚಾರ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ದೇಶದ 90 ಜಿಲ್ಲೆಗಳನ್ನು ಬಹು ಅಭಿವೃದ್ದಿ ವಿಶೇಷ ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು ಇವುಗಳಲ್ಲಿ ಕರ್ನಾಟಕದಲ್ಲಿ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆ ಸೇರಿವೆ ಎಂದರು.
ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿನ ಪ್ರಗತಿ ತಮಗೆ ತೃಪ್ತಿ ತಂದಿಲ್ಲ ಎಂದರು. ಅದಕ್ಕಾಗಿ ಯಾವ ತೆರನಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ, ಹಣ ಹೇಗೆ ವೆಚ್ಚ ಮಾಡಲಾಗಿದೆ ಎಂಬುದರ ಪರಿಶೀಲನೆಗಾಗಿ ತಂಡವನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಲಾಗುವುದು, ಅಲ್ಲದೆ ಚುನಾವಣೆ ನಂತರ ಗುಲ್ಬರ್ಗಕ್ಕೆ ಆಗಮಿಸಿ ಪ್ರಗತಿ ಪರಿಶೀಲನೆ ಮಾಡುವುದಾಗಿ ಖುರ್ಷಿದ್ ತಿಳಿಸಿದರು.
15 ಅಂಶ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು ಸಂಸದರು, ಶಾಸಕರಿರುವ ಸಮಿತಿಯೇ ಸ್ಥಳೀಯ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದರು.
ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ ಹಣ ಪಡೆದುಕೊಳ್ಳುವ ಬ್ಯಾಂಕ್‌ಗಳಲ್ಲಿ ಠೇವಣಿರಹಿತ ಖಾತೆ ತೆರೆಯಲು ಸಹ ಆದೇಶ ಹೊರಡಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಲ್ಮಾನ್ ಖುರ್ಷಿದ್ ಹೇಳಿದರು.