ತುರ್ತು ಚಿಕಿತ್ಸೆ-ಅಲೋಪತಿ ವೈದ್ಯರಿಗೆ ಅನುಮತಿ: ಶ್ರೀರಾಮುಲು
ಹೊಸಪೇಟೆ, ಶುಕ್ರವಾರ, 10 ಸೆಪ್ಟೆಂಬರ್ 2010( 15:25 IST )
ರಾಜ್ಯದ ಆಯುಷ್ ವೈದ್ಯರಿಗೆ ತುರ್ತು ಚಿಕಿತ್ಸೆ ವೇಳೆ ಅಲೋಪಥಿ ಔಷಧ ಬಳಸಲು ಶೀಘ್ರದಲ್ಲೇ ಅನುಮತಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಔಷಧ ಸಸಿ ವಿತರಿಸಿ ಮಾತನಾಡಿದ ಅವರು, ಆಯುಷ್ ವೈದ್ಯರಿಗೂ ಎಂಬಿಬಿಎಸ್ ವೈದ್ಯರಿಗೆ ಸಮಾನ ವೇತನ ನೀಡಲಾಗುವುದು. ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದರು.
ಕೇಂದ್ರ ಸರಕಾರದಿಂದ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಗೆ 800 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗುತ್ತಿದೆ. ಇದರಲ್ಲಿ ಶೇ.10ರಷ್ಟು ಆಯುಷ್ ವೈದ್ಯರಿಗೆ ನೀಡಲಾಗುವುದು. ಕೇಂದ್ರ ಬಿಡುಗಡೆ ಮಾಡಿರುವ 40 ಕೋಟಿ ರೂ.ನಲ್ಲಿ ಈಗಾಗಲೇ ರಾಜ್ಯಾದ್ಯಂತ 65 ಆಯುಷ್ ಆಸ್ಪತ್ರೆ ನಿರ್ಮಾಣ ಮಾಡಲು ತಲಾ 60 ಲಕ್ಷ ರೂ. ನೀಡಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಆಯುಷ್ ವೈದ್ಯರ ಕೊಠಡಿ ತೆರೆಯಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹಂದಿಜ್ವರಕ್ಕೆ ಆಯುರ್ವೇದ ವೈದ್ಯರು ಶ್ರಮಪಟ್ಟು ಔಷಧ ಕಂಡು ಹಿಡಿದಿದ್ದಾರೆ. ಈ ರೋಗಕ್ಕೆ ಔಷಧ ಇಲ್ಲದ ಸಂದರ್ಭದಲ್ಲಿ ಭಾರಿ ತೊಂದರೆ ಅನುಭವಿಸಿದ್ದೆವು. ಇದಕ್ಕೆ ಔಷಧ ಕಂಡು ಹಿಡಿದ ವೈದ್ಯರಿಗೆ ನಾನು ಚಿರಋಣಿ ಎಂದರು.