ಕುಡಿದ ಮತ್ತಿನಲ್ಲಿ ಖಾಸಗಿ ಬಸ್ ಚಾಲಕನ ಜತೆ ಜಗಳವಾಡಿದ ಯುವಕರು ಬಸ್ ಹೈಜಾಕ್ ಮಾಡಿ ನಂತರ ಪೊಲೀಸರ ಅತಿಥಿಯಾಗಿರುವ ಅಪರೂಪದ ಘಟನೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನೆಲಮಂಗಲದ ವಸಂತ್ ಕುಮಾರ್ (25), ಹರೀಶ್ (26), ತಿಮ್ಮೇಗೌಡ (25), ಮಂಜುನಾಥ್ (28) ಮತ್ತು ಮುನೀಶ್ (21) ಬಂಧಿತರು ಆರೋಪಿಗಳೆಲ್ಲ ರಾತ್ರಿ 12 ಗಂಟೆ ಸುಮಾರಿಗೆ ಕಾರಿನಲ್ಲಿ ನೆಲಮಂಗಲ ಕಡೆ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ವಿನಾಯಕ ಟ್ರಾವೆಲ್ಸ್ನ ಬಸ್ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿತ್ತು.
ಗೋವರ್ಧನ್ ಚಿತ್ರಮಂದಿರ ಬಳಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಿಟ್ಟಿಗೆದ್ದ ಐದೂ ಮಂದಿ ಚಾಲಕ ಉಮೇಶ್ ನಾಯ್ಕ್ ಜತೆ ವಾಗ್ವಾದ ನಡೆಸಿದ್ದಾರೆ. ನಂತರ ಅಲ್ಲಿಂದ ಹೊರಟ ಬಸ್ಸ್ ಅನ್ನು ಹಿಂಬಾಲಿಸಿದ ಆರೋಪಿಗಳು ಪಾರ್ಲೆಜಿ ಬಿಸ್ಕೆಟ್ ಕಾರ್ಖಾನೆ ಸಮೀಪ ವಾಹನ ಅಡ್ಡಗಟ್ಟಿ ಚಾಲಕನನ್ನು ಬಸ್ನಿಂದ ಕೆಳಗಿಳಿಸಿ, ವಸಂತ್ ಎಂಬಾತ ಬಸ್ ಚಲಾಯಿಸಿಕೊಂಡು ಮುಂದೆ ಸಾಗಿದ್ದ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಉಮೇಶ್ ದೂರು ನೀಡಿದ್ದು, ಕೂಡಲೇ ಬಸ್ ಅನ್ನು ಬೆನ್ನಟ್ಟಿ ಹಿಡಿಯಲಾಯಿತು.
ಬಸ್ ಅನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪ್ರಯಾಣಿಕರನ್ನು ಬೇರೆ ವಾಹನಗಳಲ್ಲಿ ಬೆಳಗಾವಿಗೆ ಕಳುಹಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.