ಸಿದ್ದು ಬಿಜೆಪಿ ಸೇರಲು ಆಡ್ವಾಣಿ ಭೇಟಿ ಮಾಡಿದ್ರು!: ವರ್ತೂರು
ಕಡೂರು, ಶನಿವಾರ, 11 ಸೆಪ್ಟೆಂಬರ್ 2010( 12:12 IST )
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ವಿರೋಧ ಪಕ್ಷದ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನಕ್ಕೆ ಅವರು ಬಿಜೆಪಿಯ ಆಪರೇಷನ್ ಕಮಲ ಬೆಂಬಲಿಸಲು ದೆಹಲಿಗೆ ತೆರಳಿದ್ದರು. ಅಲ್ಲದೇ ಬಿಜೆಪಿ ವರಿಷ್ಠ ಎಲ್.ಕೆ.ಆಡ್ವಾಣಿ ಅವರನ್ನು ಭೇಟಿಯಾಗಿ ಪಕ್ಷ ಸೇರಲು ಮಾತುಕತೆ ನಡೆಸಿದ್ದರು...ಹೀಗೆ ಆರೋಪಿಸಿ ವಾಗ್ದಾಳಿ ನಡೆಸಿದವರು ಬೇರಾರು ಅಲ್ಲ, ಸಿದ್ದು ಬಲಗೈ ಬಂಟನಾಗಿ ಇದೀಗ ಮುನಿಸಿಕೊಂಡಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್!
ಶುಕ್ರವಾರ ಕಡೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವರ್ತೂರು ಈ ವಿಷಯವನ್ನು ಬಹಿರಂಗಪಡಿಸಿದರು.
ಆಪರೇಶನ್ ಕಮಲ ನಡೆಸಲು ಯಡಿಯೂರಪ್ಪ ಜತೆ ಕೈಜೋಡಿಸಿರುವುದಕ್ಕೆ ನಾನೇ ಸಾಕ್ಷಿ ಎಂದು ದೂರಿದರು. ಈ ಸಂದರ್ಭದಲ್ಲಿ ನಡೆದ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಿಜೆಪಿ ಜತೆ ಕೈಜೋಡಿಸಿದ್ದರು. ಅದರ ಪರಿಣಾಮ ಕಾಂಗ್ರೆಸ್ ಗೆಲುವು ಸಾಧಿಸದೆ ಸೋಲುಂಡಿತ್ತು ಎಂದು ವಾಗ್ದಾಳಿ ನಡೆಸಿದರು.
ಹಾಗಾಗಿ ಕುರುಬರ ಮುಖಂಡ ಎಂದು ಸೋಗು ಹಾಕಿರುವ ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ, ಅವರನ್ನು ಯಾರೂ ನಂಬಬೇಡಿ. ಕುರುಬ ಜನಾಂಗದಲ್ಲಿ ಬೇರೊಬ್ಬರು ನಾಯಕರಾಗುವುದು ಅವರಿಗೆ ಬೇಕಾಗಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಏನೂ ಮಾಡಲು ಹೇಸದ ರಾಜಕಾರಣಿ ಎಂದರೆ ಸಿದ್ದರಾಮಯ್ಯ ಎಂದು ಗುರುವಿಗೆ ತಿರುಮಂತ್ರ ಹೇಳಿದರು.
ಆಡಳಿತಾರೂಢ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿದಾಗ ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ್ದು ಸಿದ್ದರಾಮಯ್ಯ ಎಂದು ನೇರವಾಗಿ ಆರೋಪಿಸಿದರು. ಕಡೂರು ಕ್ಷೇತ್ರದ ಶಾಸಕರಾಗಿದ್ದ ಕೃಷ್ಣಮೂರ್ತಿಯವರಿಗೂ ಕೂಡ ಸಿದ್ದು ಸಚಿವ ಸ್ಥಾನ ಸಿಗದಂತೆ ಅಡ್ಡಗಾಲು ಹಾಕಿದ್ದರು ಎಂದರು.
ಇಂತಹ ಅವಕಾಶವಾದಿ ರಾಜಕಾರಣಿಯ ಮಾತನ್ನು ಮತದಾರರು ನಂಬಬಾರದು, ವಿಶೇಷವಾಗಿ ಕುರುಬ ಸಮಾಜದವರು ಸಿದ್ದರಾಮಯ್ಯನವರ ಕೀಳುಮಟ್ಟದ ರಾಜಕಾರಣವನ್ನು ತಿರಸ್ಕರಿಸಬೇಕು ಎಂದು ವರ್ತೂರು ಈ ಸಂದರ್ಭದಲ್ಲಿ ಕಡೂರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡರು.
ವರ್ತೂರು ಚಿಲ್ಲರೆ ರಾಜಕಾರಣಿ-ಸಿದ್ದು ತಿರುಗೇಟು: ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ವರ್ತೂರು ಪ್ರಕಾಶ್ ಕುರಿತಂತೆ ಸುದ್ದಿಗಾರರು ಪ್ರಶ್ನಿಸಿದಾಗ, ವರ್ತೂರು ಒಬ್ಬ ಚಿಲ್ಲರೆ ರಾಜಕಾರಣಿ ಅವನ ಮಾತಿಗೆ ಯಾವುದೇ ಹೇಳಿಕೆ ನೀಡಲಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.