ಸಂಪುಟದಲ್ಲಿರುವ ಯಾರಿಗೂ ಸಚಿವರಾಗುವ ಅರ್ಹತೆ ಇಲ್ಲ: ದೇವೇಗೌಡ
ಕಡೂರು, ಭಾನುವಾರ, 12 ಸೆಪ್ಟೆಂಬರ್ 2010( 15:02 IST )
ರಾಜ್ಯದ ಸಂಪುಟದಲ್ಲಿರುವ ಯಾವುದೇ ಸದಸ್ಯರಿಗೆ ಸಚಿವರಾಗುವ ಅರ್ಹತೆ ಇಲ್ಲ. ಅವರೆಲ್ಲ ಅಯೋಗ್ಯರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಪರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಗೌಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರುಗಳಿಗೀಗ ತರಬೇತಿ ನೀಡುವ ಅವಶ್ಯಕತೆ ಇದೆ. ಇದು ರಾಜ್ಯದ ದೌರ್ಭಾಗ್ಯದ ರಾಜಕೀಯ ವ್ಯವಸ್ಥೆ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜಾತಿ, ಹಣಬಲ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಹಣ, ಹೆಂಡದ ಮೂಲಕ ಮತ ಗಳಿಸಲು ಹಾತೊರೆಯುತ್ತಿವೆ. ಆದರೆ, ಕ್ಷೇತ್ರದಲ್ಲಿ 4 ವರ್ಷದಿಂದ ದತ್ತ ಪ್ರೀತಿ ರಾಜಕಾರಣದ ಅಲೆ ಎಬ್ಬಿಸಿದ್ದಾರೆ. ಈ ಕ್ಷೇತ್ರ ತಮ್ಮ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ವಿವಿಧ ಯೋಜನೆಗಳಡಿ ಅನುದಾನ ತರಲು ಕ್ರಿಯಾ ಯೋಜನೆ ತಯಾರಿಸಿದ್ದೇನೆ ಎಂದರು.
ಈ ಕ್ಷೇತ್ರದಲ್ಲಿ ಜಾತಿ ಬಲ ಎಂಬ ಪದ ಕ್ಷೀಣಿಸಿದೆ. ದತ್ತ ಜಾತಿ ರಾಜಕಾರಣಕ್ಕೆ ಎಂದೂ ಬೆಲೆ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವ ಸರಳ, ಸಜ್ಜನ. ಬಿಜೆಪಿ ಜಾತಿ ಬಲದ ಮೇಲೆ ವಿಶ್ವಾಸ ಇಟ್ಟು ಜಾತಿ ಆಧಾರಿತ ಕಲ್ಪನೆಯಲ್ಲಿ ಸಮಾಜ ವಿಂಗಡಿಸಿ ತಡರಾತ್ರಿವರೆಗೆ ಸಭೆ ನಡೆಸುತ್ತಿದೆ. ರಾಜಾರೋಷವಾಗಿ ಹಣ ಹಂಚಲಾಗುತ್ತಿದೆ. ಅಧಿಕಾರಿಗಳೂ ಸುಮ್ಮನಿರುವ ಸ್ಥಿತಿ ನಿರ್ಮಾಣವಾಗಿದೆ. ಹಣದಿಂದ ಬಿಜೆಪಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.