ಬೆಂಗಳೂರು, ಭಾನುವಾರ, 12 ಸೆಪ್ಟೆಂಬರ್ 2010( 16:26 IST )
PTI
ಬಿಜೆಪಿ ಸರ್ಕಾರದ ಮತ್ತೊಂದು ವಿಕೆಟ್ ಪತನವಾಗುವ ಮೂಲಕ ಮುಜುಗರಕ್ಕೆ ಒಳಗಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮ ನೇಮಕಾತಿ ವಿವಾದದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ರಾಜೀನಾಮೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಯನ್ನು ಸ್ವೀಕರಿಸಿದ್ದು, ಆ ಮೂಲಕ ಬಿಜೆಪಿ ಸರ್ಕಾರದಲ್ಲಿ ಆರನೇ ವಿಕೆಟ್ ಪತನವಾಗಿದೆ.
ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ 35 ವೈದ್ಯಕೀಯೇತರ ನೌಕಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ವರದಿಗಳನ್ನು ಸ್ವತಃ ಸಚಿವ ರಾಮಚಂದ್ರ ಗೌಡರೇ ತಳ್ಳಿಹಾಕಿದ್ದರೂ, ಇದೀಗ ಅವರು ರಾಜೀನಾಮೆಗೆ ಶರಣಾಗದ್ದಾರೆ. ವಿರೋಧ ಪಕ್ಷದವರು ಅಕ್ರಮ ನೇಮಕಾತಿಯ ವಿಚಾರವನ್ನೇ ಪ್ರಮುಖ ವಿವಾದವನ್ನಾಗಿ ಮಾಡುತ್ತಿರುವುದರಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಮಚಂದ್ರ ಗೌಡರಲ್ಲಿ ಸಚಿವ ಸ್ಥಾನ ತ್ಯಾಗ ಮಾಡಲು ತಿಳಿಸಿದ್ದಾಗಿ ಹೇಳಲಾಗಿದೆ.
ಈ ಹಿಂದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠ್ಠಲಮೂರ್ತಿ ಖಚಿತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ.
ರಾಜೀನಾಮೆ ಸ್ವಾಗತಾರ್ಹ: ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದು ಸ್ವಾಗತಾರ್ಹ ಬೆಳವಣಿಗೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿ ತೀರ್ಮಾನ ಆಗಲಿದೆ. ಅಲ್ಲಿಯವರೆಗೂ ಸಚಿವ ರಾಮಚಂದ್ರಗೌಡ ರಾಜೀನಾಮೆಗೆ ಶರಣಾಗಿದ್ದು ಉತ್ತಮ ಬೆಳವಣಿಗೆ ಎಂದು ಈಶ್ವರಪ್ಪ ತಿಳಿಸಿದರು. ಆದರೆ, ಗೃಹ ಸಚಿವ ವಿ.ಎಸ್. ಆಚಾರ್ಯ ಮಾತ್ರ ಈ ಬೆಳವಣಿಗೆಯ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.