ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿರುವ ಗುಲ್ಬರ್ಗಾ ದಕ್ಷಿಣ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಾಗಿನ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭವಾಗಿದೆ.
ಆಡಳಿತ ಪಕ್ಷ ಬಿಜೆಪಿಯು ಗುಲ್ಬರ್ಗಾದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿಯವರನ್ನು ಹಾಗೂ ಕಡೂರಿನಲ್ಲಿ ಡಾ. ವಿಶ್ವನಾಥ್ ಅವರನ್ನು ಕಣಕ್ಕಳಿಸಿದೆ.
ಗುಲ್ಬರ್ಗಾದಲ್ಲಿ ಉಳಿದಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಹಾಗೂ ಜೆಡಿಎಸ್‌ನಿಂದ ಅರುಣಾ ಪಾಟೀಲ ರೇವೂರ ಕಣದಲ್ಲಿದ್ದಾರೆ. ಕಡೂರಿನಲ್ಲಿ ಕಾಂಗ್ರೆಸ್‌ನಿಂದ ಕೆ.ಎಂ. ಕೆಂಪರಾಜು ಹಾಗೂ ಜೆಡಿಎಸ್‌ನಿಂದ ವೈ.ಎಸ್. ದತ್ತ ಅವರು ಸ್ಪರ್ಧೆಯಲ್ಲಿದ್ದಾರೆ.
ಉಪ ಚುನಾವಣೆಯು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವುದರಿಂದ ಎಲ್ಲಾ ಮೂರು ಪಕ್ಷಗಳೂ ಅಬ್ಬರದ ಪ್ರಚಾರ ಕೈಗೊಂಡಿದ್ದವು.
ಇಂದು ಬೆಳಿಗ್ಗೆಯಿಂದಲೇ ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದೆ. ಮತದಾರರು ಸಾಲುಗಟ್ಟಿ ನಿಂತು ಹುರುಪಿನಿಂದ ಮತ ಚಲಾವಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ.
ಗುಲ್ಬರ್ಗಾ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಸಿಂಗ್ ಅವರು ಬಾಲಮಂದಿರ ಮತಗಟ್ಟೆಯಲ್ಲಿ, ಕಡೂರು ಕಾಂಗ್ರೆಸ್ ಅಭ್ಯರ್ಥಿ ಕೆಂಪರಾಜು ಅವರು ಬೀರನಹಳ್ಳಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮಂದಿ ತಮ್ಮ ಕ್ಷೇತ್ರಗಳಲ್ಲಿ ಮತ ಹಾಕಿದ್ದಾರೆ.
ಪೂಜೆ ಸಲ್ಲಿಸಿ ದತ್ತಾ ಮತದಾನ... ಕಡೂರಿನ ಜೆಡಿಎಸ್ ಅಭ್ಯರ್ಥಿ ದತ್ತಾ ಅವರು ಮತದಾನಕ್ಕೂ ಮೊದಲು ಹಿರಿಯರಿಂದ ಆಶೀರ್ವಾದ ಪಡೆದು, ಅರೇಕಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಪತ್ನಿ ಸಮೇತರಾಗಿ ಯಗಟಿ ಗ್ರಾಮದ ಮತಗಟ್ಟೆಗೆ ತೆರಳಿದ ದತ್ತಾ, ಹಕ್ಕು ಚಲಾಯಿಸಿದರು. ತಾನು ಗೆದ್ದೇ ಗೆಲ್ಲುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ದತ್ತಾ ವ್ಯಕ್ತಪಡಿಸಿದ್ದಾರೆ.
ತಾನು ಹಣ-ಹೆಂಡ ಹಂಚಿ ಮತ ಯಾಚಿಸಿಲ್ಲ. ಅದೆಲ್ಲ ಮಾಡಿರುವುದು ಬಿಜೆಪಿಯವರು. ಹಾಗಾಗಿ ನಮಗೆ ಸೋಲಿನ ಭಯವಿಲ್ಲ. ಗೆಲುವು ನಮ್ಮದೇ ಎಂದು ದತ್ತಾ ಹೇಳಿದರು.
ನಮೋಶಿಗೂ ಗೆಲುವಿನ ಭರವಸೆ... ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿಯವರು ಪತ್ನಿ ಮತ್ತು ತಾಯಿಯ ಜತೆಗೂಡಿ ಎನ್.ವಿ. ಪದವಿ ಕಾಲೇಜಿನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಅವರು, ತಾನು ಗೆದ್ದಲ್ಲಿ ಒಳಚರಂಡಿ, ರಸ್ತೆ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ನನ್ನ ಗುರಿ ಅಭಿವೃದ್ಧಿ. ಖಂಡಿತಾ ಜನರು ನನಗೆ ಮನ್ನಣೆ ನೀಡುವ ಭರವಸೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇಲ್ಲಿ ಹಣ ಹಂಚಿಕೆ ಮಾಡಿವೆ. ಹಣದಿಂದ ಗೆಲುವು ಸಾಧ್ಯವಿಲ್ಲ. ನಾನು ಖಂಡಿತಾ ಗೆಲ್ಲಲಿದ್ದೇನೆ. ಇದಕ್ಕಾಗಿ ದೇವರ ಮೊರೆ ಹೋಗಿದ್ದೇನೆ ಎಂದರು.