ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪಕ್ಷದೊಳಗಿನ ತಿಕ್ಕಾಟ, ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಹಲವಾರು ಪ್ರಸಂಗಗಳಲ್ಲಿ ಮುಜುಗರಕ್ಕೆ ಈಡಾಗಿದ್ದು, ಎರಡೂವರೆ ವರ್ಷಗಳ ಆಡಳಿತಾವಧಿಯಲ್ಲಿ ಆರು ಮಂದಿ ಸಚಿವರು ರಾಜೀನಾಮೆ ನೀಡಿರುವುದು ಕೂಡ ಸರಕಾರದ ಪಾರದರ್ಶಕ ಆಡಳಿತಕ್ಕೊಂದು ಕಪ್ಪು ಚುಕ್ಕೆಯಾಗಿದೆ.
ಉಮೇಶ್ ಕತ್ತಿ ಅವರನ್ನು ಆಪರೇಶನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಿಗೊಂಡು ಅವರಿಗೆ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಎಸ್.ಕೆ.ಬೆಳ್ಳುಬ್ಬಿ ಅವರ ರಾಜೀನಾಮೆ ಪಡೆಯಲಾಗಿತ್ತು. ವಸತಿ ಯೋಜನೆಗಳಿಗೆ ಜಮೀನು ಖರೀದಿ ಪ್ರಕರಣದಲ್ಲಿ ಸಿಲುಕಿದ್ದ ಕೃಷ್ಣಯ್ಯ ಶೆಟ್ಟಿ ಅವರು ಆಪರೇಶನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿದ್ದ ವಿ.ಸೋಮಣ್ಣ ಅವರಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಿದ್ದ ಸೋಮಣ್ಣ, ಗೋವಿಂದರಾಜನಗರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಅನುಭವಿಸಬೇಕಾಯಿತು. ಅನಿವಾರ್ಯವಾಗಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.
ಬಳ್ಳಾರಿ ಗಣಿ ಧಣಿಗಳ ಬ್ಲ್ಯಾಕ್ ಮೇಲ್ ರಾಜಕೀಯ, ಹಲವು ಶಾಸಕರ ಆಕ್ಷೇಪಕ್ಕೆ ಗುರಿಯಾಗಿ ಪಕ್ಷದೊಳಗೆ ತಲೆದೋರಿದ್ದ ಬಂಡಾಯ ಶಮನಕ್ಕೆ ಶೋಭಾ ಕರಂದ್ಲಾಜೆ ತಲೆದಂಡ ಪಡೆಯಲಾಯಿತು.
ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಸಚಿವ ಹರತಾಳು ಹಾಲಪ್ಪ ಕೂಡ ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಏತನ್ಮಧ್ಯೆ ವೈದ್ಯ ಕಾಲೇಜುಗಳಲ್ಲಿನ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಲುಕಿರುವ ಸಚಿವ ರಾಮಚಂದ್ರ ಗೌಡ ಕೊನೆಗೂ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.