ಜೆಡಿಎಸ್‌ಗೆ ಗುಲ್ಬರ್ಗದಲ್ಲಿ ಮತದಾರರ ಒಲವಿಲ್ಲ ಎಂಬುದು ಸುಳ್ಳು ಸಮೀಕ್ಷೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗುಲ್ಬರ್ಗ ದಕ್ಷಿಣ ಮತ್ತು ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಬೀದರ್‌ಗೆ ತೆರಳುವ ಮುನ್ನ ನಗರದಲ್ಲಿ ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯನ್ನು ಜನರು ಸುಳ್ಳಾಗಿಸಲಿದ್ದಾರೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಜಂಟಿಯಾಗಿ ನಡೆಸಿದ ಸಮೀಕ್ಷೆ ಹಿಂದೆಯೂ ಅನೇಕ ಸಲ ಸುಳ್ಳಾಗಿದೆ. ಈಗಲೂ ಹಾಗೆ ಆಗಲಿದೆ ಎಂದರು. ಇಂತಹ ಬೂಟಾಟಿಕೆಯ ಸಮೀಕ್ಷೆಗಳನ್ನು ಪ್ರಕಟಿಸುವ ಮೂಲಕ ಜನರಿಗೆ ಮಂಕುಬೂದಿ ಎರಚುವ ಸಂಚು ಮಾಡಲಾಗಿದೆ ಎಂದು ಎಚ್‌ಡಿಕೆ ಕಿಡಿಕಾರಿದರು.
ಮತದಾನ ಪೂರ್ವ ಸಮೀಕ್ಷೆ ಪ್ರಸಾರ, ಪ್ರಕಟಣೆ ಮಾಡಬಾರದು ಎಂಬ ನಿಯಮವಿದ್ದರೂ ಹೀಗೆ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು. ಗುಲ್ಬರ್ಗದಲ್ಲಿ ಜೆಡಿಎಸ್‌ಗೆ ಮತದಾರರು ಎಷ್ಟೊಂದು ಪ್ರಮಾಣದಲ್ಲಿ ಆಶೀರ್ವಾದ ಮಾಡುತ್ತಾರೆ ಎಂಬುದು ಫಲಿತಾಂಶ ಪ್ರಕಟಗೊಂಡ ನಂತರ ಈಗ ಸುಳ್ಳು ಸಮೀಕ್ಷೆ ಮಾಡಿದವರಿಗೆ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
ಗುಲ್ಬರ್ಗ ಜನತೆ ಮುಗ್ಧರು, ಆದರೆ ಮೂರ್ಖರಲ್ಲ ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು. ಇಂತಹ ಸುಳ್ಳು ಸಮೀಕ್ಷೆ ಪ್ರಕಟಿಸಿ ಜನರನ್ನು ದಾರಿ ತಪ್ಪಿಸಬೇಕು ಎಂಬ ಸಂಚು ನಡೆಸಿದರೆ ಏನು ಪ್ರಯೋಜನವಾಗಲ್ಲ. ಜನರು ಸಮೀಕ್ಷೆ ಓದಿ-ನೋಡಿ ಮತ ಹಾಕುವುದಿಲ್ಲ, ಬದಲಿಗೆ ಒಳ್ಳೆಯ ವ್ಯಕ್ತಿ, ಜನಪರ ಕಾಳಜಿ, ಹಾಗೂ ಮಾನವೀಯತೆ ಅಭ್ಯರ್ಥಿಗೆ ಮತ ನೀಡುತ್ತಾರೆ, ಅರುಣಾ ಪಾಟೀಲ್ ಅವರ ಬಗ್ಗೆ ಜನರಲ್ಲಿ ಅನುಕಂಪವಿದೆ, ಹೀಗಾಗಿ ಗೆಲ್ಲುತ್ತಾರೆ ಎಂದರು.