ಸರಕಾರದಲ್ಲಿ ಇನ್ನೂ ಕೆಲ ಭ್ರಷ್ಟ ಮಂತ್ರಿಗಳಿದ್ದಾರೆ: ದೇಶಪಾಂಡೆ
ಗುಲ್ಬರ್ಗ, ಸೋಮವಾರ, 13 ಸೆಪ್ಟೆಂಬರ್ 2010( 16:48 IST )
ಬಿಜೆಪಿ ಸರಕಾರದಲ್ಲಿ ಇನ್ನೂ ಕೆಲವು ಮಂತ್ರಿಗಳು ಅವ್ಯವಹಾರ ನಡೆಸುತ್ತಿದ್ದು, ಅವರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಕೊಳ್ಳುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.
ಅಕ್ರಮ ನೇಮಕ, ಲಂಚದ ವ್ಯವಹಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಮಚಂದ್ರೇಗೌಡರು ಕೊನೆಗೂ ರಾಜಿನಾಮೆ ನೀಡಿದ್ದಾರೆ. ಹಾಗೆ ನೋಡಿದರೆ ಯಡಿಯೂರಪ್ಪನವರು ಆರೋಪ ಬಂದ ದಿನವೇ ಇವರನ್ನು ಸಂಪುಟದಿಂದ ವಜಾ ಮಾಡಬೇಕಾಗಿತ್ತು ಎಂದು ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಮಚಂದ್ರೇಗೌಡ, ಹಾಲಪ್ಪ ಹೀಗೆ ಮಂತ್ರಿಗಳೇ ಇಲ್ಲಿ ಅವ್ಯಹಾರ ಮತ್ತಿತರ ಆರೋಪಗಳಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಅವರು ಆರೋಪಗಳು ಬಂದಾಗಲೂ ಸಹ ತಮ್ಮ ಖುರ್ಚಿ ಉಳಿಸಿಕೊಳ್ಳಲು ಏನೆಲ್ಲ ಪ್ರಯತ್ನಗಳನ್ನು ಇವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ನಂತರ, ಹೈಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡು ರಾಜೀನಾಮೆ ನೀಡುವುದು ರಾಮಚಂದ್ರೇಗೌಡರಿಗೆ ಬೇಕಾಗಿತ್ತೇ. ಮೊದಲೇ ರಾಜೀನಾಮೆ ಕೊಟ್ಟಿದ್ದರೆ ಆಗುತ್ತಿರಲಿಲ್ಲವೇ? ಎಂದು ದೇಶಪಾಂಡೆ ಪ್ರಶ್ನಿಸಿದ್ದಾರೆ.