ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಂಜಿನಿಯರಿಂಗ್ ಪ್ರವೇಶಕ್ಕೆ ಏಕ ಮಾದರಿ ಪದ್ಧತಿ: ಜನಾರ್ದನಸ್ವಾಮಿ (Janaedana swamy | BJP | Congress | chithra durga | IIT | kapil sibal)
ಎಂಜಿನಿಯರಿಂಗ್ ಪ್ರವೇಶಕ್ಕೆ ಏಕ ಮಾದರಿ ಪದ್ಧತಿ: ಜನಾರ್ದನಸ್ವಾಮಿ
ಚಿತ್ರದುರ್ಗ, ಸೋಮವಾರ, 13 ಸೆಪ್ಟೆಂಬರ್ 2010( 16:51 IST )
ದೇಶದ ಎಲ್ಲ ಎಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ಏಕ ಮಾದರಿ ಪದ್ಧತಿ ಅಳವಡಿಸಲು ಐಐಟಿ ಕೌನ್ಸಿಲ್ ಚಿಂತನೆ ನಡೆಸಿರುವುದಾಗಿ ಕೌನ್ಸಿಲ್ ಸದಸ್ಯರೂ ಆದ ಸಂಸದ ಜನಾರ್ದನಸ್ವಾಮಿ ವಿವರಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಪುರಂದೇಶ್ವರಿ, ಸಂಸದರಾದ ದೀಪೇಂದ್ರ ಹೂಡಾ, ವಿಭಾ ಪಂತ್ ಭಾಗವಹಿಸಿದ್ದ ಕೌನ್ಸಿಲ್ ಸಭೆಯಲ್ಲಿ ಈಗಿರುವ ಪ್ರವೇಶ ನೀತಿಯಲ್ಲಿನ ಲೋಪದೋಷಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು ಎಂದರು.
ಇದರ ಅಧ್ಯಯನಕ್ಕೆ ಮೂರು ಜನರ ಸಮಿತಿ ರಚಿಸಲಾಗಿದ್ದು, ಮೂರು ತಿಂಗಳೊಳಗೆ ವರದಿ ನೀಡಲು ಸೂಚಿಸಲಾಗಿದೆ. ವಿದೇಶಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಗೆ ಐಐಟಿಗಳಿಗೆ ಪ್ರವೇಶ ನೀಡಲೂ ಚಿಂತನೆ ನಡೆದಿದೆ. ವಿದೇಶಿ ತಜ್ಞರ ಜ್ಞಾನ ದೇಶದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಲ್ಲದೆ, ಐಐಟಿ ಹಾಗೂ ದೇಶಕ್ಕೂ ಸಹಕಾರಿಯಾಗಲಿದೆ. ಪ್ರತಿಭಾ ಪಲಾಯನವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದಿದ್ದಾರೆ.
ವಿದೇಶಿಯರಿಗೆ ಪ್ರವೇಶ ನೀಡುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಸಭೆಯ ಗಮನಕ್ಕೆ ತರಲಾಯಿತು. ಅಮೆರಿಕದಲ್ಲಿ ವಿದ್ಯಾರ್ಥಿಗಳ ವೀಸಾ ದುರುಪಯೋಗ ಪಡಿಸಿಕೊಂಡೇ ಸೆ. 11 ಘಟನೆ ನಡೆಯಿತು. ಹೀಗಾಗಿ ಪ್ರವೇಶಾರ್ಥಿಗಳ ಪೂರ್ವಾಪರದ ತೀವ್ರ ತನಿಖೆ ನಂತರವೇ ಅವಕಾಶ ಕಲ್ಪಿಸಬೇಕೆಂದು ತಾವು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
ಅಲ್ಲದೆ, ಐಐಟಿಗಳಲ್ಲಿ ವೈದ್ಯಕೀಯ ವಿಭಾಗ ಆರಂಭಿಸುವ ಬಗ್ಗೆಯೂ ಚರ್ಚೆ ನಡೆಯಿತು. ಜೈವಿಕ, ವೈದ್ಯಕೀಯ, ತಾಂತ್ರಿಕ ವಿಭಾಗಗಳಲ್ಲಿ ಹೆಚ್ಚಿನ ತಾಂತ್ರಿಕ ವಿಷಯಗಳು ಅಡಕವಾಗಿವೆ. ಉನ್ನತ ಶಿಕ್ಷಣಕ್ಕೆ ಈ ತಾಂತ್ರಿಕ ವಿಷಯಗಳು ಪೂರಕವಾಗುವುದರ ಜತೆ ಸಂಶೋಧನೆಗೆ ಸಹಾಯಕವಾದ್ದರಿಂದ ವೈದ್ಯಕೀಯ ವಿಭಾಗ ಅಗತ್ಯವಿದೆ ಎಂದು ಕೌನ್ಸಿಲ್ ಅಭಿಪ್ರಾಯಕ್ಕೆ ಬಂದಿದೆ ಎಂದರು.