ಸಚಿವ ಸ್ಥಾನ ನೀಡಬೇಕು ಎಂದು ಹೇಳುತ್ತಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬೇಕಾದರೆ ತಮ್ಮ ದಾರಿಯನ್ನು ನೋಡಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಖಾರವಾಗಿ ತಿರುಗೇಟು ನೀಡಿದ್ದಾರೆ.
ನಗರದ ಆದಿಚುಂಚನಗಿರಿ ಪ್ರೌಢಶಾಲಾ ಆವರಣದಲ್ಲಿ ನವೀಕೃತ ವುಡನ್ ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಭಾನುವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಹಿರಂಗವಾಗಿ ಹೇಳಿಕೆ ನೀಡುವ ಅಗತ್ಯವಿಲ್ಲ. ಅವರ ದಾರಿ ನೋಡಿಕೊಳ್ಳಬಹುದು ಎಂದು ಬೇಳೂರು ಅಸಮಾಧಾನಕ್ಕೆ ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬೇಳೂರು ತಮ್ಮ ಸ್ವಂತ ಶಕ್ತಿಯ ಮೇಲೆ ಸ್ವತಂತ್ರವಾಗಿ ಗೆದ್ದಿಲ್ಲ. ಪಕ್ಷ ಮತ್ತು ಸಂಘಟನೆಯ ಕಾರ್ಯಕರ್ತರು ಕೆಲಸ ಮಾಡಿದ್ದರಿಂದ ಗೆದ್ದಿದ್ದಾರೆ. ಅವರು ಆ ರೀತಿ ಮಾತನಾಡಬಾರದಿತ್ತು. ಅವರ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು, ಸಂಘಟಕರಿಗೆ ನೋವಾಗಿದೆ. ಎಲ್ಲ 117 ಶಾಸಕರೂ ಮಂತ್ರಿ ಮಾಡಿ ಎಂದು ಕೇಳಿದರೆ ಸಾಧ್ಯವಿಲ್ಲ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿರುವುದು ರಾಮಚಂದ್ರೇಗೌಡರ ಸ್ವಂತ ನಿರ್ಧಾರ. ಯಾರೂ ರಾಜೀನಾಮೆಗೆ ಒತ್ತಡ ಹೇರಿಲ್ಲ. ಮುಖ್ಯಮಂತ್ರಿಗಳ ಅಪೇಕ್ಷೆಯಂತೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ನಿರ್ಧಾರಕ್ಕೆ ಏನು ಕಾರಣ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು.
ಬಾಯಿಗೆ ಬಂದಂತೆ ಮಾತನಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನ ಅರಿತು ಮಾತನಾಡಲಿ ಎಂದ ಈಶ್ವರಪ್ಪ, ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದರು.