ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉಪ ಚುನಾವಣೆ ಮತದಾನ ಅಂತ್ಯ; ಸೋಲು-ಗೆಲುವಿನ ಲೆಕ್ಕಾಚಾರ (Gulbarga south | kaduru | BJP | JDS, Congress | By election)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರ ನಡೆದ ಮತದಾನದ ವೇಳೆ ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಅಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತಯಂತ್ರ ಸೇರಿದೆ.

ಕಳೆದ ಒಂದು ತಿಂಗಳಿನಿಂದ ನಡೆದ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟ ಅಂತ್ಯಗೊಂಡಿದ್ದು, ಸೆ.16ರಂದು ಮತಎಣಿಕೆ ನಡೆಯಲಿದ್ದು ಅಲ್ಲಿಯವರೆಗೆ ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯಕ್ಕಾಗಿ ಕಾಯುತ್ತಿವೆ.

ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ, ಇನ್ನುಳಿದಂತೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಕಡೂರು ಕ್ಷೇತ್ರದಲ್ಲಿ ಬೆಳಿಗ್ಗೆ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಮಧ್ಯಾಹ್ನ ನಂತರ ಮತದಾನ ಚುರುಕುಗೊಂಡಿದ್ದು, ಒಟ್ಟಾರೆ ಶೇ.65ರಷ್ಟು ಮತದಾನ ಆಗಿರುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕಡೂರು ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತ ತಮ್ಮ ಪತ್ನಿ ನಿರ್ಮಲಾ ಅವರಗೊಂದಿಗೆ ಯಗಟಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಕೆಂಪರಾಜು ಅವರು ಪತ್ನಿ ಪದ್ಮ ಅವರೊಂದಿಗೆ ಬೀರನಹಳ್ಳಿಯಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರು ಪತ್ನಿ ಸುವರ್ಣ ಜತೆ ಯಳ್ಳಂಬಳಸೆಯಲ್ಲಿ ಕುಟುಂಬ ಸಮೀತ ಆಗಮಿಸಿ ಮತ ಚಲಾಯಿಸಿದರು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಾತಿ ಆಧಾರದ ಮೇಲೆ ಹಣ ಹಂಚಿದ್ದಾರೆಂದು ಆರೋಪಿಸಿ ಕ್ಯಾದಿಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಮತದಾನವನ್ನು ಬಿಹಿಷ್ಕರಿಸಿದ್ದರು. ನಂತರ ಚುನಾವಣಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮನವೊಲಿಸಿದ ನಂತರ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ವೃದ್ದೆ ಸಾವು: ಬೀರೂರಿನ ಮತಗಟ್ಟೆ 44ರಲ್ಲಿ ಗಂಗಮ್ಮ (80) ಎಂಬವರು ಮತ ಚಲಾಯಿಸಿ ಹೊರಬಂದ ನಂತರ ಮತಗಟ್ಟೆ ಹೊರಗಡೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಭಾರೀ ಕುತೂಹಲ ಕೆರಳಿಸಿರುವ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ.55ರಷ್ಟು ಮತದಾನವಾಗಿರುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸಣ್ಣ-ಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿತ್ತು.

ಬಿಜೆಪಿಯಿಂದ ಶಶಿಲ್ ನಮೋಶಿ, ಜೆಡಿಎಸ್‌ನಿಂದ ಅರುಣಾ ಪಾಟೀಲ್ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಧರಂಸಿಂಗ್ ಪುತ್ರ ಡಾ.ಅಜಯ ಸಿಂಗ್ ಅಖಾಡದಲ್ಲಿದ್ದಾರೆ. ಬೆಳಿಗ್ಗೆ 7ಗಂಟೆಯಿಂದ ಆರಂಭವಾದ ಮತದಾನದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಬಸವನನಗರದಲ್ಲಿರುವ ಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಶಿಶಿಲ್ ಅವರು ಪತ್ನಿ, ತಾಯಿ ಹಾಗೂ ಪುತ್ರರೊಂದಿಗೆ ಆಗಮಿಸಿ ಮತದಾನ ಮಾಡಿದರು. ಸಂಸದ ಧರಂಸಿಂಗ್ ಕೂಡ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಗೆಲುವು ಯಾರಿಗೆ?: ಗುಲ್ಬರ್ಗಾ ದಕ್ಷಿಣ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ, ಮತದಾರರ ಓಲೈಕೆಗಾಗಿ ಸಾಕಷ್ಟು ಕಸರತ್ತು ನಡೆಸಿವೆ. ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲುವು ತಮ್ಮದೇ ಎಂಬ ಲೆಕ್ಕಚಾರ ಹೇಳುತ್ತಿವೆ. ಆದರೆ ಮತದಾರ ಪ್ರಭುಗಳ ನಿರ್ಧಾರ ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರದೊಳಗೆ ಸೇರಿವೆ. ಸೆಪ್ಟೆಂಬರ್ 16ರಂದು ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ