ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಾನ ಗಾರುಡಿಗ ಪುಟ್ಟರಾಜ ಗವಾಯಿ ತೀವ್ರ ಅಸ್ವಸ್ಥ (Puttaraju gavai | Belagavi | Veereshwara Ashrama | Sri ramulu)
Bookmark and Share Feedback Print
 
ಖ್ಯಾತ ಹಿಂದೂಸ್ತಾನಿ ಗಾಯಕ, ಗಾನ ಗಾರುಡಿಗ ಪುಟ್ಟರಾಜ ಗವಾಯಿ (97 ವರ್ಷ) ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು ಅವರನ್ನು ಇಲ್ಲಿನ ಕೆಎಲ್‌ಇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದ ಕಾರಣ ಸೋಮವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದೊಯ್ಯಲಾಗಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ನ್ಯೂಮೋನಿಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗವಾಯಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಗದಗ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಗವಾಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ವಿಷಯ ತಿಳಿದ ಸಾವಿರಾರು ಭಕ್ತರು ಆಶ್ರಮಕ್ಕೆ ಭೇಟಿ ನೀಡಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.

1914ರಲ್ಲಿ ಜನಿಸಿದ ಪುಟ್ಟರಾಜ ಗವಾಯಿ ಅವರು ಹುಟ್ಟು ಅಂಧರಾಗಿದ್ದರೂ ಕೂಡ ಸಂಗೀತ ಸರಸ್ವತಿಯನ್ನು ಆರಾಧಿಸಿ ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಹಿಂದಿಯಲ್ಲಿ ಶ್ರೀಗಳು ಬರೆದ ಬಸವ ಪುರಾಣ ಕೃತಿ ಸಾಕಷ್ಟು ಜನಮನ್ನಣೆ ಗಳಿಸಿತ್ತು. ಅಂಧ ಮಕ್ಕಳಿಗೆ ಸಂಗೀತ ಮತ್ತು ಸಾಹಿತ್ಯ ಬೋಧನೆ ಮಾಡುವ ಮೂಲಕ ತಮ್ಮ ಜೀವನದ ಬಹುಪಾಲು ಸಮಯ ಕಳೆದಿದ್ದಾರೆ.

ಗವಾಯಿ ಅವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ 1961ರಲ್ಲಿ ಗೌರವ ಡಾಕ್ಟರೇಟ್ ನೀಡಿತ್ತು. ಇದಲ್ಲದೆ, ಮಧ್ಯಪ್ರದೇಶ ಸರಕಾರದ ಕಾಳಿದಾಸ್ ಸಮ್ಮಾನ್ ಪ್ರಶಸ್ತಿಯನ್ನೂ ಗವಾಯಿ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು. ಅದೇ ರೀತಿ ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ನಾಡೋಜ ಪ್ರಶಸ್ತಿ ಸೇರಿದಂತೆ ಬಸವಶ್ರೀ, ಕೇಂದ್ರ ಸರಕಾರದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ