ಶಿವಮೊಗ್ಗ, ಮಂಗಳವಾರ, 14 ಸೆಪ್ಟೆಂಬರ್ 2010( 15:16 IST )
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾವತಿ ಅವರ ಬಟ್ಟೆಯ ಮೇಲಿದ್ದ ವೀರ್ಯ ಮಾಜಿ ಸಚಿವ ಹರತಾಳು ಹಾಲಪ್ಪ ಅವರದ್ದು ಎಂದು ಡಿಎನ್ಎ ವರದಿಯಿಂದ ಬಹಿರಂಗಗೊಂಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಾವತಿ ಪತಿ ವೆಂಕಟೇಶ್ ಮೂರ್ತಿ, ಅತ್ಯಾಚಾರ ಪ್ರಕರಣ ಕುರಿತಂತೆ ಡಿಎನ್ಎ ಪರೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ ಚಂದ್ರಾವತಿ ಬಟ್ಟೆಯ ಮೇಲಿದ್ದ ವೀರ್ಯ ಹಾಲಪ್ಪ ಅವರದ್ದೇ ಎಂದು ಖಚಿತವಾಗಿದೆ. ಆ ನಿಟ್ಟಿನಲ್ಲಿ ಇದು ತಮ್ಮ ಹೋರಾಟಕ್ಕೆ ಸಂದ ಮೊದಲ ಜಯವಾಗಿದೆ ಎಂದು ತಿಳಿಸಿದ್ದಾರೆ.
ತಾನು ನಿರಪರಾಧಿ, ರಾಜಕೀಯ ಪಿತೂರಿಗಾಗಿ ತನ್ನ ಮೇಲೆ ಆರೋಪ ಹೊರಿಸಿರುವುದಾಗಿ ಮಾಜಿ ಸಚಿವ ಹಾಲಪ್ಪ ಆರೋಪಿಸಿದ್ದರು. ಆದರೆ ಡಿಎನ್ಎ ಪರೀಕ್ಷೆಯ ಫಲಿತಾಂಶ ಅವರ ಸುಳ್ಳಿನ ಹೇಳಿಕೆಯನ್ನು ಬಯಲು ಮಾಡಿದೆ. ಅಲ್ಲದೇ ಪ್ರಕರಣದಲ್ಲಿ ತಮಗೆ ಗೆಲುವು ದೊರೆಯುವ ವಿಶ್ವಾಸ ಇರುವುದಾಗಿ ಚಂದ್ರಾವತಿ ಪತಿ ವೆಂಕಟೇಶ್ ಮೂರ್ತಿ ಹೇಳಿದ್ದಾರೆ.
ಹೈದರಾಬಾದಿನ ಸಿಡಿಎಫ್‌ಡಿ ಕೇಂದ್ರ ವರದಿ ಪ್ರಕಾರ, ಹಾಲಪ್ಪ ಹಾಗೂ ಚಂದ್ರಾವತಿ ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಚಂದ್ರಾವತಿ ವಿಡಿಯೋ ತುಣುಕಿನಲ್ಲಿ ತೋರಿಸಿರುವ ಬಟ್ಟೆಯಲ್ಲಿದ್ದ ವೀರ್ಯದ ಕಲೆ ಹಾಲಪ್ಪ ಅವರದ್ದು ಎಂದು ಖಚಿತವಾಗಿದೆ. ಅಲ್ಲದೆ. ಚಂದ್ರಾವತಿ ಹಾಗೂ ಹಾಲಪ್ಪ ಅವರ ನಡುವೆ ದೈಹಿಕ ಸಂಪರ್ಕ ನಡೆದಿದ್ದು ನಿಜ ಎಂದು ತಿಳಿಸಲಾಗಿದೆ.
ಒಟ್ಟಾರೆ ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಹಾಲಪ್ಪ ಅವರ ಅತ್ಯಾಚಾರ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ತಾನು ನಿರಪರಾಧಿ. ಮಾಜಿ ಮುಖ್ಯಮಂತ್ರಿ (ಬಂಗಾರಪ್ಪ)ಯೊಬ್ಬರ ಕುಮ್ಮಕ್ಕಿನಿಂದಾಗಿ ತನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವುದಾಗಿ ಹಾಲಪ್ಪ ಇತ್ತೀಚೆಗಷ್ಟೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ವೆಂಕಟೇಶ್ ಮೂರ್ತಿ ಹಾಗೂ ಚಂದ್ರಾವತಿ ದಂಪತಿಗಳ ಆರೋಪದ ಹಿನ್ನೆಲೆಯಲ್ಲಿ ಹಾಲಪ್ಪ ಸಚಿವಗಿರಿಯೂ ಹೋಗಿತ್ತು. ಇದೀಗ ಡಿಎನ್ಎ ಪರೀಕ್ಷೆಯ ಫಲಿತಾಂಶದ ವರದಿಯ ಬಹಿರಂಗದ ನಂತರ ಪ್ರಕರಣ ಯಾವ ತಿರುವುದು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಾಗಿದೆ.