ರಾಜ್ಯದ ಸರಕಾರಿ ವೈದ್ಯ ಕಾಲೇಜುಗಳಲ್ಲಿ ನಡೆದಿರುವ ನೇಮಕಾತಿ ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲಿ ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಮತ್ತು ಮೈಸೂರು ವೈದ್ಯ ಕಾಲೇಜಲ್ಲಷ್ಟೇ ಅಲ್ಲ, ಬೇರೆ ಕಾಲೇಜಿನಲ್ಲೂ ಹಗರಣ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಅಗತ್ಯ ಎಂದ ಅವರು, ತಾವು ಸಚಿವರಾಗಿದ್ದಾಗ ನೇಮಕದಲ್ಲಿ ಅಕ್ರಮ ನಡೆದಿದ್ದರೂ ಕ್ರಮ ಜರುಗಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಿ, ತಮ್ಮ ಅಭ್ಯಂತರ ಇಲ್ಲ ಎಂದರು.
ಸಚಿವ ರಾಮಚಂದ್ರಗೌಡ ಹಣ ತಗೊಂಡಿದ್ದಾರೋ? ಅವರ ಆಪ್ತ ಕಾರ್ಯದರ್ಶಿ ವ್ಯವಹಾರ ಮಾಡಿದ್ದಾರೋ? ಪ್ರಿನ್ಸಿಪಾಲ್ ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ನಾನಂತೂ ಯಾರ ನೇಮಕಕ್ಕೂ ಶಿಫಾರಸು ಪತ್ರ ನೀಡಿಲ್ಲ ಎಂದ ಅವರು, ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿರುವಾಗ ನಾವೇನೂ ಹೇಳುವಂತಿಲ್ಲ. ಮುಂದೆ ಕೋರ್ಟ್ ನೀಡುವ ತೀರ್ಪಿಗೆ ಬದ್ಧ ಎಂದು ಹೇಳಿದರು.
ಚುನಾವಣೆ ವೇಳೆ ಮಾಧ್ಯಮಗಳು ಸಮೀಕ್ಷೆ ನಡೆಸುವುದು ಸರಿಯಲ್ಲ. ಸಮೀಕ್ಷೆಗಳಿಂದ ಶೇ. 5ರಿಂದ 10ರಷ್ಟು ಮತಗಳು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆದ್ದರಿಂದ ಸರಕಾರ ಈ ಬಗ್ಗೆ ಶಾಸನ ರೂಪಿಸಬೇಕು ಎಂದ ಅವರು, ಕಡೂರು ಮತ್ತು ಗುಲ್ಬರ್ಗ ವಿಧಾನಸಭೆ ಉಪಚುನಾವಣೆಯಲ್ಲಿ ಗಣಿ ಹಣದ ಹೊಳೆಯೇ ಹರಿದಿದೆ. ಆದರೂ ಚುನಾವಣೆ ಆಯೋಗ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.