ಕಡೂರು ಮತ್ತು ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಯಾಗುತ್ತಾರೆಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ತಾಪಂ ಸಭಾ ಭವನದಲ್ಲಿ 2009ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರದ ಚೆಕ್ ವಿತರಿಸಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆ ಕ್ಷೇತ್ರದಲ್ಲಿನ ಜನರ ವಿಶ್ವಾಸಗಳಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಮತ ಕೇಳುವ ನೈತಿಕ ಹಕ್ಕನ್ನು ಕೂಡಾ ಕಳೆದುಕೊಂಡಿವೆ. ಹೀಗಾಗಿ ಬಹುಮತದ ಅಂತರದಿಂದ ಗೆಲ್ಲುವ ವಿಶ್ವಾಸ ಬಿಜೆಪಿಗಿದೆ ಎಂದರು.
ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಕೊಂಡ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರಕಾರ ಶೀಘ್ರವೇ ಪತನಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಏನೂ ಆಗಲಿಲ್ಲ. ಯಾರು ಏನೇ ಹೇಳಿದರೂ ಬಿಜೆಪಿ ಸರಕಾರ ಐದು ವರ್ಷ ಸಂಪೂರ್ಣ ಅಧಿಕಾರದಲ್ಲಿರುತ್ತದೆ ಎಂದು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಾಟಾ ಉಕ್ಕು ಕಾರ್ಖಾನೆಗೆ ರೈತರ ವಿರೋಧವಿಲ್ಲ. ಶೇ.90ರಷ್ಟು ರೈತರು ಭೂಮಿ ಕೊಡಲು ಮುಂದೆ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಾರ್ಖಾನೆ ತಲೆ ಎತ್ತುವುದು ಖಚಿತ. ಜಿಲ್ಲೆಯನ್ನು ಬಿಟ್ಟು ಬೇರೆ ಕಡೆ ಹೊಗುವ ಪ್ರಶ್ನೆಯೇ ಇಲ್ಲ ಒಂದು ವೇಳೆ ಅಲ್ಲಿನ ರೈತರು ಯಾವುದೇ ಸೂತ್ರಕ್ಕೆ ರಾಜಿ ಆಗದಿದ್ದಲ್ಲಿ ಹಾನಗಲ್ಲಿನಲ್ಲಿ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿದರು.