ಗುಲ್ಬರ್ಗ, ಮಂಗಳವಾರ, 14 ಸೆಪ್ಟೆಂಬರ್ 2010( 16:02 IST )
ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಗರಣಗಳ ಸರಕಾರ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಲ್ಲಿನ ಬಸವನಗರದ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದ ನಂತರ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದರು.
ಬಿಜೆಪಿ ಸರಕಾರದ ಪ್ರತಿಯೊಬ್ಬ ಮಂತ್ರಿಯೂ ಒಂದೊಂದು ಹಗರಣದಲ್ಲಿ ಶಾಮೀಲಾಗಿದ್ದಾರೆ. ವೈದ್ಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ರಾಜೀನಾಮೆ ನೀಡಿ ಸಂಪುಟದಿಂದ ಹೊರ ಬಂದಿದ್ದಾರೆ. ಮೊದಲು ಹಾಲಪ್ಪ ತಲೆದಂಡವಾಗಿತ್ತು. ಹಾಗಾಗಿ ರಾಜ್ಯ ಕಂಡ ಅತ್ಯಂತ ಕೆಟ್ಟ ಸರಕಾರ ಇದು ಎಂದು ಟೀಕಿಸಿದರು.
ಎರಡೂವರೆ ವರ್ಷದ ಅವಧಿಯಲ್ಲಿ ಬಿಜೆಪಿಯ ಜನ ವಿರೋಧಿ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಜನರು ಇಂತಹ ಭ್ರಷ್ಟ ಸರಕಾರಕ್ಕೆ, ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ ಸಿಂಗ್ ಗೆಲುವು ನಿಶ್ಚಿತ ಎಂಬ ದೃಢ ವಿಶ್ವಾಸವನ್ನು ಖರ್ಗೆ ವ್ಯಕ್ತಪಡಿಸಿದರು. ಬಿಜೆಪಿಗೆ ವಿರೋಧವಾಗಿ ಜನರು ಇರುವುದರಿಂದ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.