ರಾಜೀನಾಮೆ ಸಾಲದು, ಕ್ರಿಮಿನಲ್ ಮೊಕದ್ದಮೆ ಹಾಕ್ಬೇಕು: ಉಗ್ರಪ್ಪ
ಕೊಪ್ಪಳ, ಮಂಗಳವಾರ, 14 ಸೆಪ್ಟೆಂಬರ್ 2010( 16:05 IST )
ಹಾಸನ ಹಾಗೂ ಮೈಸೂರು ವೈದ್ಯಕೀಯ ಕಾಲೇಜಿನ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ರಾಮಚಂದ್ರಗೌಡ ರಾಜೀನಾಮೆ ನೀಡಿದರೆ ಸಾಲದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ರಾಜ್ಯ ಸರಕಾರ ಆಡಳಿತ ವೈಫಲ್ಯ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮಚಂದ್ರಗೌಡರು ರಾಮಸೀತೆಯಷ್ಟೇ ಪವಿತ್ರ ಎಂದು ಹೇಳಿದ್ದರು. ತಾವು ಕುರಿ, ಮಗ ಕುರಿಮರಿಯಾಗಿದ್ದೇವೆ ಎನ್ನುವ ಮೂಲಕ ಹಗರಣಕ್ಕೆ ಹೊಸ ತಿರುವು ನೀಡಲೆತ್ನಿಸಿ ಕೊನೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮೂಲಕ ಮೇಲ್ನೋಟಕ್ಕೆ ಅಪರಾಧ ಸಾಬೀತಾಗಿದೆ. ಕಾನೂನು ಪ್ರಕಾರ ಮಾಜಿ ಸಚಿವ ರಾಮಚಂದ್ರಗೌಡ ಸೇರಿದಂತೆ ಹಗರಣದಲ್ಲಿ ಭಾಗಿಯಾದವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.
ಅಲಿಬಾಬಾ ಮತ್ತು 40 ಕಳ್ಳರು ಎಂಬ ಕಥೆಯಂತೆ ಸರಕಾರವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಲಿಬಾಬಾ ಆಗಿದ್ದರೆ ಉಳಿದ ಸಚಿವ ಹಾಗೂ ಶಾಸಕರು ಕಳ್ಳರಂತಿದ್ದಾರೆ. 8-10 ಮೊಕದ್ದಮೆ ಇರುವವರು ಸಚಿವರಾಗಿದ್ದಾರೆ ಎಂದು ಸ್ವತಃ ರಾಮಚಂದ್ರಗೌಡರೇ ಸತ್ಯ ಬಹಿರಂಗಗೊಳಿಸಿದ್ದಾರೆ.
ಪಾದಯಾತ್ರೆಯ ಮುಂದುವರಿದ ಭಾಗ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ಹಾಗೂ ಕಡೂರಿನಲ್ಲಿ ಕಾಂಗ್ರೆಸ್ ಪರ ಹಾಗೂ ಬಿಜೆಪಿ ವಿರೋಧ ಅಲೆಯಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.